
ಮಂಗಳೂರು: ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಹಿಮ್ಮೇಳದಲ್ಲಿ ಚೆಂಡೆ-ಮದ್ದಳೆ ವಾದಕರಾಗಿ ಹೆಸರು ಗಳಿಸಿ, ಹಿರಿಯ ಕಲಾವಿದರಾಗಿ ಸೇವೆಗೈದು, ಅದರಲ್ಲೂ ‘ಪದ್ಯಾಣ + ಕಡಬ’ ಜೋಡಿ ಎಂದೇ ಪ್ರಸಿದ್ದಿ ಪಡೆದು ಕಣ್ಮರೆಯಾದ ಕಡಬ ನಾರಾಯಣ ಆಚಾರ್ಯ ಮತ್ತು ಅತೀ ಸಣ್ಣ ಪ್ರಾಯದಲ್ಲೇ ಅದ್ವಿತೀಯ ಮದ್ದಳೆ ವಾದಕರಾಗಿ ಯಕ್ಷರಂಗಕ್ಕೆ ತನ್ನದೇ ಆದ ಛಾಪನ್ನು ಮೂಡಿಸಿ ಇಹಲೋಕ ತ್ಯಜಿಸಿದ ಅವರ ಪುತ್ರ ಕಡಬ ವಿನಯ ಆಚಾರ್ಯರವರ ಹೆಸರನ್ನು ಶಾಶ್ವತವಾಗಿರಿಸಲು ಪ್ರತಿವರ್ಷವೂ ಸಂಸ್ಕರಣೆ ಹಾಗೂ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರಿಗೆ ಗೌರವ ನಿಧಿಯೊಂದಿಗೆ “ಕಡಬ ವಿನಯ, ನಾರಾಯಣ ಆಚಾರ್ಯ ಸಂಸ್ಕರಣಾ ಪ್ರಶಸ್ತಿ”ಯನ್ನು ನೀಡುತ್ತಾ ಬರುತ್ತಿದ್ದು, ಈ ವರ್ಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮಲ್ಲಿ ಚೆಂಡೆ, ಮದ್ದಳೆ ವಾದಕರಾಗಿ ಹಿರಿಯರ ಸಾಲಿನಲ್ಲಿ ಗುರುತಿಸಿಕೊಂಡಿರುವ, ಪ್ರಸ್ತುತ ನಿವೃತ್ತಿ ಜೀವನದಲ್ಲಿರುವ ವೆಂಕಟೇಶ ಶೆಟ್ಟಿ ಮೂರ್ಜೆ ಇವರಿಗೆ 2026ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕು ಮೂಡುಪಡುಕೋಡಿ ಗ್ರಾಮದ ಕುದೊಟ್ಟಿ ಕಟ್ಟೆ ಎಂಬಲ್ಲಿ ದಿ। ಲೀಲಾವತಿ ಹಾಗೂ ನಾರಾಯಣ ಭಂಡಾರಿ ದಂಪತಿಗೆ ಸುಪುತ್ರರಾಗಿ ಜನಿಸಿ, ತಮ್ಮ ಮಾತೃಶ್ರೀಯವರ ಪ್ರೋತ್ಸಾಹದಿಂದ ಎಳೆವೆಯಲ್ಲಿಯೇ ಯಕ್ಷಗಾನದ ಬಗ್ಗೆ ಆಸಕ್ತಿಯನ್ನು ಹೊಂದಿ ಪ್ರಥಮವಾಗಿ ಯಕ್ಷರಂಗದ ಬೀಷ್ಮ ದಿ: ನೆಡ್ಲೆ ನರಸಿಂಹ ಭಟ್ಟರಲ್ಲಿ ಹಿಮ್ಮೇಳದ ಬಾಲಪಾಠಗಳನ್ನು ಕಲಿತು. ಬಳಿಕ ಹಿರಿಯ ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ದಿ। ಕಡಬ ನಾರಾಯಣ ಆಚಾರ್ಯರ ಗುರುತ್ವದಲ್ಲಿ ಪಳಗಿ ಹಿಮ್ಮೇಳ ವಾದನದ ಸರ್ವಾಂಗಗಳನ್ನು ಅಭ್ಯಾಸಿಸಿ ಸಮರ್ಥ ಮದ್ದಳೆಗಾರರಾಗಿ ವೃತ್ತಿ ಜೀವನವನ್ನು ಆರಂಭಿಸಿದವರು. ತಾವು ತಳಕಳ, ಕದ್ರಿ, ಬಪ್ಪನಾಡು, ಸುರತ್ಕಲ್, ಕಟೀಲು ಮೇಳಗಳಲ್ಲಿ ಸುಮಾರು ಎರಡು ದಶಕಗಳ ಸೇವೆ ಸಲ್ಲಿಸಿ, ತಮ್ಮ ಅನಾರೋಗ್ಯದ ಕಾರಣದಿಂದಾಗಿ ವೃತ್ತಿಯಿಂದ ನಿವೃತ್ತಿಗೊಂಡು, ಅತಿಥಿ ಕಲಾವಿದರಾಗಿ ಭಾಗವಹಿಸುತ್ತಾ ಸರ್ವರ ಗೌರವಾದರಗಳಿಗೆ ಪಾತ್ರರಾದವರು. ಪ್ರಸ್ತುತ ಪೂಂಜಾಲಕಟ್ಟೆಯಲ್ಲಿ ಸಣ್ಣ ಅಂಗಡಿಯನ್ನು ನಡೆಸುತ್ತಾ ಯಾವುದೇ ಪ್ರಚಾರದ ಹಿಂದೆ ಹೋಗದೆ ಸಂತೃಪ್ತಿಯಿಂದ ಜೀವನ ಸಾಗಿಸುತ್ತಿರುವ ವೆಂಕಟೇಶ ಶೆಟ್ಟಿಯವರಿಗೆ ಬರುವ ತಾ. 25.10.2026ರಂದು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು ಇದರ “ಸರಸ್ವತೀ ಸದನ”ದಲ್ಲಿ ಅಹರಾಹ್ನ 2.00 ಗಂಟೆಯಿಂದ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರುಗಳಿಂದ ಯಕ್ಷಗಾನ ಕಾರ್ಯಕ್ರಮದೊಂದಿಗೆ ಪ್ರಶಸ್ತಿಯನ್ನು ಗೌರವ ನಿಧಿಯೊಂದಿಗೆ ನೀಡಿ ಗೌರವಿಸಲಾಗುವುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಗೌರವಾಧ್ಯಕ್ಷ ಜಿ.ಟಿ.ಆಚಾರ್ಯ ಮುಂಬೈ, ಕಾರ್ಯದರ್ಶಿ ಗಿರೀಶ್ ಕಾವೂರು, ಡಿ.ಭಾಸ್ಕರ್ ಆಚಾರ್ಯ ಅಂಡಿಂಜೆ ಮತ್ತಿತರರು ಉಪಸ್ಥಿತರಿದ್ದರು.