
ಮಂಗಳೂರು: “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿಯ ಯಾವ ಕಾರ್ಯಕ್ರಮ ಕೂಡ ನಡೆಯುತ್ತಿಲ್ಲ. ಅಭಿವೃದ್ಧಿ ಕುರಿತು ಪ್ರಶ್ನೆ ಮಾಡುವಾಗ ಜಿಲ್ಲೆಯಲ್ಲಿ ಸಣ್ಣಪುಟ್ಟ ಗಲಾಟೆಗಳನ್ನು ವೈಭವೀಕರಿಸಿ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವನ್ನು ಸರಕಾರ ಮಾಡುತ್ತ ಬಂದಿದೆ. ಇದಕ್ಕೆ ತಾಜಾ ಉದಾಹರಣೆಯೇ ನಿನ್ನೆ ಸೈಂಟ್ ಅಗ್ನೇಸ್ ಕಾಲೇಜಿನಲ್ಲಿ ನಡೆದಿರುವ ರಜಾ ವಿವಾದ. ದಸರಾ ರಜೆ ಸಮಯದಲ್ಲಿ ಪರೀಕ್ಷೆ ಇಡಬೇಡಿ ಎಂದರೂ ಕೇಳದ ಕಾಲೇಜ್ ಆಡಳಿತ ಮಂಡಳಿ ಪರೀಕ್ಷೆ ಇಟ್ಟಿದ್ದು ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆಗೈದಿರುವುದು ಖಂಡನೀಯ“ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ. ಪತ್ರಿಕಾಗೋಷ್ಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

”ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಹೆಣ್ಣುಮಕ್ಕಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಮಹಿಳಾ ಸಿಬ್ಬಂದಿ ನಿಯೋಜನೆ ಮಾಡಿರಲಿಲ್ಲ. ಇದರಿಂದಾಗಿ ಪುರುಷ ಸಿಬ್ಬಂದಿ ಹೆಣ್ಣುಮಕ್ಕಳ ಮೈಮೇಲೆ ಕೈಹಾಕಿದ್ದಾರೆ. ಇದಕ್ಕೆ ಜಿಲ್ಲಾಡಳಿತ ನೇರ ಹೊಣೆಯನ್ನು ಹೊರಬೇಕಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ಕಾಲೇಜ್ ಆಡಳಿತ ಮಂಡಳಿಗೆ ಮನವಿ ನೀಡಲು ಹೋದ ಎಬಿವಿಪಿ ವಿದ್ಯಾರ್ಥಿಗಳನ್ನು ಪೊಲೀಸರು ಎಳೆದಾಡಿದ್ದಾರೆ. ಇದು ವಿದ್ಯಾರ್ಥಿಗಳ ಹಕ್ಕನ್ನು ದಮನಿಸುವ ಪ್ರಯತ್ನವಾಗಿದೆ. ದೆಹಲಿಯಲ್ಲಿ ವಿದ್ಯಾರ್ಥಿಗಳ ಹಕ್ಕಿಗಾಗಿ ಹೋರಾಡುತ್ತೇವೆ ಎನ್ನುವ ಕಾಂಗ್ರೆಸ್ ಸರಕಾರ ಮಂಗಳೂರಿನಲ್ಲಿ ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ“ ಎಂದು ಆರೋಪಿಸಿದರು.
ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಉಪಾಧ್ಯಕ್ಷ ಲೋಹಿತ್ ಅಮೀನ್, ರಕ್ಷಿತ್ ಪೂಜಾರಿ, ಲಕ್ಷ್ಮಿ ಆಚಾರ್, ವಿಠಲ ಸಾಲಿಯಾನ್, ಸುಕೇಶ್, ಮನೋಹರ್ ಶೆಟ್ಟಿ, ಭರತ್ ರಾಜ್ ಕೃಷ್ಣಾಪುರ, ಆಶಿತ್ ನೋಂಡ, ಶ್ವೇತಾ ಪೂಜಾರಿ, ರಣ್ ದೀಪ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.
