
ಕಲಬುರಗಿ: ಐಪಿಎಲ್ ಬೆಟ್ಟಿಂಗ್‌ನಲ್ಲಿ ನಷ್ಟ ಅನುಭವಿಸಿದಕ್ಕೆ ವ್ಯಕ್ತಿಯೋರ್ವ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ(ಏ.10) ನಡೆದಿದೆ.

ಕಾಳಗಿ ತಾಲ್ಲೂಕಿನ ರುಮ್ಮನಗೂಡ ಗ್ರಾಮದ ನಿವಾಸಿ ಚಂದ್ರಕಾಂತ ಮಾಧವರಾವ ದೇಸಾಯಿ(40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಚಂದ್ರಕಾಂತ ಐಪಿಎಲ್ ನಲ್ಲಿ ಬೆಟ್ಟಿಂಗ್ ಆಡಿ ಸಾಕಷ್ಟು ಹಣ ಕಳೆದುಕೊಂಡು ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಇದರಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಬೆಳಿಗ್ಗೆ ಮನೆಯಿಂದ ಹೊರ ಬಂದಿದ್ದು, ನಾಗೂರ ಸೇತುವೆ ಬಳಿ ಬೈಕ್ ನಿಲ್ಲಿಸಿ, ಮೊಬೈಲ್ ಬಿಟ್ಟು ನೀರಿಗೆ ಜಿಗಿದಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

ಶೋಧ ಕಾರ್ಯ ನಡೆಸಿದ ಬಳಿಕ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಮಹಾಗಾಂವ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.