
ಉಡುಪಿ: ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ಗ್ರಾಮೀಣ ಪ್ರದೇಶಗಳನ್ನು ಪ್ರತ್ಯೇಕ ಗ್ರಾಮ ಪಂಚಾಯಿತಿಗಳಾಗಿ ರಚಿಸಬೇಕೆಂದು ಆಗ್ರಹಿಸಿ, ತಾಲೂಕು ರೈತ ಸಂಘ ಬೈಂದೂರು ಇವರ ನೇತೃತ್ವದಲ್ಲಿ ಕಳೆದ 432 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಂದು ರಾಜ್ಯ ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ಅವರೊಂದಿಗೆ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದಂದೆ ಶಾಸಕ ಮಂಜುನಾಥ ಭಂಡಾರಿ ಅವರು ಸಲ್ಲಿಸಿದ ಮನವಿಯನ್ನು ಪರಿಗಣಿಸಿದ ಸಚಿವರು, ತಗ್ಗರ್ಸೆ, ಆಲಂದೂರು, ವಸ್ರೆ, ಗಂಗನಾಡು ಹಾಗೂ ಮದ್ದೋಡಿ ಗ್ರಾಮಗಳನ್ನು ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಲ್ಲದೆ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಸಚಿವರು, ಪ್ರತಿಭಟನೆಯನ್ನು ಮುಕ್ತಾಯಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್, ವೀರಭದ್ರ ಗಾಣಿಗ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಿಶನ್ ಹೆಗ್ಡೆ, ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರವಿಂದ್ ಪೂಜಾರಿ ಸೇರಿದಂತೆ ಪಕ್ಷದ ಹಲವು ಮುಖಂಡರು, ನಾಯಕರು ಹಾಗೂ ಪ್ರತಿಭಟನಾಕಾರರು ಉಪಸ್ಥಿತರಿದ್ದರು.
