
ಮಂಗಳೂರು: ಕರಾವಳಿಯ ಸಾಂಸ್ಕೃತಿಕ ಮತ್ತು ಗ್ರಾಮೀಣ ಕ್ರೀಡೆ ಕಂಬಳದ ಬಗ್ಗೆ ನಮಗೆಲ್ಲ ಅಪಾರ ಗೌರವ ಮತ್ತು ಅಭಿಮಾನವಿದ್ದು ನಾವು ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಕಂಬಳ ಕ್ರೀಡೆ ಆಯೋಜನೆ ಬೇಡ ಎಂದು ಹೇಳುತ್ತಿರುವುದಕ್ಕೆ ಕಾರಣಗಳು ಇವೆ. ರಾಜ್ಯದಲ್ಲಿ ಭೀಕರ ಬರಗಾಲ ಆವರಿಸುತ್ತಿದ್ದು ಕಂಬಳದ ಕೋಣಗಳ ಮಾಲಕರು ವಸ್ತುಸ್ಥಿತಿ ಅರಿತುಕೊಂಡು ಕಂಬಳದ ನಿರ್ಧಾರದಿಂದ ಹಿಂದೆ ಸರಿಯಬೇಕು“ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷ ಎ.ಟಿ.ರಾಮಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ ಮನವಿ ಮಾಡಿದರು.

ರಾಜ್ಯದ 200ಕ್ಕೂ ಹೆಚ್ಚು ತಾಲ್ಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿದ್ದು, ರೈತರು ಮತ್ತು ಇತರ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತರ್ಜಲ ಪಾತಾಳ ಮುಟ್ಟಿದೆ. ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿದೆ. ದನಕರು ಆಡುಕುರಿಗಳಿಗೆ ನೀರು ಮತ್ತು ಮೇವಿನ ಅಭಾವ ಉಂಟಾಗಿದೆ. ಅಕ್ಟೋಬರ್ ತಿಂಗಳಲ್ಲೇ ಇಂತಹ ಪರಿಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಎದುರಾಗುವ ಸಂಕಷ್ಟಗಳನ್ನು ಊಹಿಸಲೂ ಸಾಧ್ಯವಿಲ್ಲ. ಸೂಪರ್ ಎಲ್ ನಿನೋ ಪರಿಣಾಮ ಭಯಾನಕವಾಗಿರುತ್ತದೆ ಎಂಬ ವರದಿಗಳಿವೆ. ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ಕೇವಲ 2500 ರೂ ಬರ ಪರಿಹಾರ ಘೋಷಿಸಿದ್ದು, ಇದು ಸರ್ಕಾರ ತಮಗೆ ಮಾಡಿರುವ ಅವಮಾನ ಎಂದು ರೈತರು ಆಕ್ರೋಶಗೊಂಡಿದ್ದಾರೆ . ಈ ಹಣ ಬಂದ ಕೂಡಲೇ ಆ ಮೊತ್ತಕ್ಕೆ ಒಂದು ರೂ ಸೇರಿಸಿ 2501 ರೂಗಳನ್ನು ಮುಖ್ಯ ಮಂತ್ರಿಗಳ ನಿಧಿಗೆ ಕೊಡುವ ತೀರ್ಮಾನವನ್ನು ರಾಜ್ಯದ ರೈತರು ಮಾಡಿದ್ದಾರೆ.
ಮೈಸೂರು ಜಿಲ್ಲೆ ಕೂಡ ತೀವ್ರ ಬರಗಾಲಕ್ಕೆ ತುತ್ತಾಗಿದೆ. ಹತ್ತಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಿದೆ. ಜಿಲ್ಲೆಯ 2991 ಕೆರೆಗಳ ಪೈಕಿ 2928 ಕೆರೆಗಳಲ್ಲಿ ನೀರಿಲ್ಲ. ಕಾಲುವೆಗಳವ ಮೂಲಕ ನೀರು ಹರಿಸಿ ಕೇವಲ 63 ಕೆರೆಗಳನ್ನು ಮಾತ್ರ ತುಂಬಿಸಲಾಗಿದೆ. ಮೈಸೂರು ನಗರದ 10 ಕಿಮೀ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳು ಬತ್ತಿಹೋಗಿವೆ. ನಗರದ ಹಲವಾರು ಬಡಾವಣೆಗಳಲ್ಲಿ ಈಗಾಗಲೇ ಕುಡಿಯುವ ನೀರಿನ ತೀವ್ರ ಅಭಾವವಿದೆ. ಕಾವೇರಿ, ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ. ಇವುಗಳ ಒಟ್ಟು ನೀರಿನ ಸಂಗ್ರಹ ಕಳೆದ ವರ್ಷದ ಸಂಗ್ರಹದ ಅರ್ಧಕ್ಕಿಂತ ಕಡಿಮೆಯಾಗಿದೆ.
ಈಗ ಕಂಬಳ ಕ್ರೀಡೆ ಮಾಡಲು ಆಯ್ಕೆ ಮಾಡಿರುವ ಜಾಗವು ಉದ್ಯಾನವನಕ್ಕೆಂದು ಮೀಸಲಾಗಿತ್ತು. ಇಲ್ಲಿ ನೂರಾರು ಮರಗಳು, ಸಣ್ಣಪುಟ್ಟ ಗಿಡಗಂಟಿಗಳು, ಪೊದೆಗಳು, ಒಂದು ಬತ್ತಿದ ಕೆರೆ ಅಂಗಳ ) ಮತ್ತು ಮೊಲ, ಅಳಿಲು ಇತ್ಯಾದಿ ಸಣ್ಣಪುಟ್ಟ ಪ್ರಾಣಿಗಳು ಮತ್ತು ಪಕ್ಷಿಗಳ ಜೀವ ಪರಿಸರ ವ್ಯವಸ್ಥೆ ಇತ್ತು. ಈಗ 50ಕ್ಕೂ ಹೆಚ್ಚು ಮರಗಳನ್ನು ನೂರಾರು ಗಿಡಗಂಟಿಗಳನ್ನು ಮತ್ತು ಪರದೆಗಳನ್ನು ತೆಗೆದು, ಇವನ್ನು ಆಶ್ರಯಿಸಿದ್ದ ಜೀವಪರಿಸರ ವ್ಯವಸ್ಥೆಯನ್ನು ನಾಶಮಾಡಿ, ಕೆರೆಯ ಅಂಗಳವನ್ನು ಮುಚ್ಚಿ ಕೋಣಗಳ ಓಟಕ್ಕೆ ಕರೆ ಸಿದ್ದಪಡಿಸಿದ್ದಾರೆ. ಮರಗಳನ್ನು ಕಡಿದಿದ್ದಕ್ಕೆ ಅರಣ್ಯ ಇಲಾಖೆ ಎಫ್ ಐ ಆರ್ ಕೂಡ ಹಾಕಿತ್ತು.
ದಸರಾ ಹಬ್ಬದಲ್ಲಿ ವಿಶ್ವವಿಖ್ಯಾತ ಅಂಬಾರಿ ಮೆರವಣಿಗೆ ಜೊತೆಗೆ, ಮಹಿಳಾ ದಸರಾ, ಮಕ್ಕಳ ದಸರಾ, ರೈತ ದಸರಾ, ಯುವದಸರಾ, ಯುವಸಂಭ್ರಮ, ಆಹಾರ ಮೇಳ, ಲೇಸರ್ ಷೋ, ಕ್ರೀಡೆಗಳು, ಆಹಾರ ಮೇಳ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಈ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮತ್ತು ಅಚ್ಚುಕಟ್ಟಾಗಿ ಮಾಡುತ್ತಿಲ್ಲ ಎಂಬುದು ಮೈಸೂರು ನಾಗರಿಕರ ಅಳಲು.
ಮೇಲಿನ ಕಾರಣಗಳಿಗಾಗಿ ಈಗ ಕಂಬಳ ಕ್ರೀಡೆ ಆಯೋಜನೆ ವಿರೋಧಿಸಿ ನಾವು ಮೂರು ತಿಂಗಳಿಂದಲೂ ಹೋರಾಟ ಮತ್ತು ಪ್ರತಿಭಟನೆ ಮಾಡುತ್ತಿದ್ದೇವೆ. ಮೈಸೂರು ಜಿಲ್ಲೆ ಮತ್ತು ನಾಡಿನ ಹಲವಾರು ಸಾಹಿತಿಗಳು ಕಲಾವಿದರು ಕೂಡ ನಮ್ಮ ಜೊತೆಗೆ ದನಿಗೂಡಿಸಿದ್ದಾರೆ. ಇಷ್ಟೆಲ್ಲಾ ಹೋರಾಟ ಮತ್ತು ಪ್ರತಿಭಟನೆ ಮಾಡಿದರೂ ಸರ್ಕಾರ ಹಠಕ್ಕೆ ಬಿದ್ದಿದೆ ಮತ್ತು ಕಂಬಳ ಕ್ರೀಡೆಯ ಆಯೋಜಕರೂ ಕೂಡ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಆದುದರಿಂದ ಕೊನೆಯ ಪ್ರಯತ್ನವಾಗಿ ಕರಾವಳಿಯ ಮಹಾಜನರು ಮತ್ತು ಕಂಬಳ ಕೋಣಗಳ ಮಾಲೀಕರಿಗೆ ಮಾಧ್ಯಮದ ಮೂಲಕ ಮನವಿ ಮಾಡಲು ಮಂಗಳೂರಿಗೆ ಬಂದಿದ್ದೇವೆ ಎಂದರು.
ಕಂಬಳ ಕ್ರೀಡೆಯಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿರುವ ಕೋಣಗಳ ಮಾಲೀಕರು ದಯವಿಟ್ಟು ನಮ್ಮ ಮನವಿಗೆ ಸ್ಪಂದಿಸಿ ನೋಂದಣಿ ರದ್ದುಪಡಿಸಿ ಕಂಬಳ ಕ್ರೀಡೆಯಿಂದ ಹಿಂದೆ ಸರಿಯಬೇಕೆಂದು ಅತ್ಯಂತ ವಿನಯಪೂರ್ವಕವಾಗಿ ವಿನಂತಿಸುತ್ತೇವೆ. ಕರಾವಳಿಯ ಪ್ರಜ್ಞಾವಂತ ಜನರು ಕೋಣಗಳ ಮಾಲೀಕರಿಗೆ ಮನವೊಲಿಸಿ ಕಂಬಳ ಕ್ರೀಡೆಯಿಂದ ಹಿಂದೆ ಸರಿಯುವಂತೆ ಮಾಡಬೇಕೆಂದು ಕಳಕಳಿಯಿಂದ ಮನವಿ ಮಾಡುವುದಾಗಿ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಪರಶುರಾಮೇಗೌಡ, ಬಡಗಲಪುರ ನಾಗೇಂದ್ರ, ಲೀಲಾ ಶಿವಕುಮಾರ್, ಗುರುಪ್ರಸಾದ್ ಕೆರಗೋಡು, ಕುಸುಮ ಆಯರಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.