ಮಂಗಳೂರು: ಏಪ್ರಿಲ್ 11 ರಿಂದ ಎರಡು ದಿನಗಳ ಕಾಲ ʻಚಾಕೊಲೇಟ್ ಸ್ಟ್ರೀಟ್ 2026′ ಉತ್ಸವ

ಮಂಗಳೂರು: ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ನಿಕೋ) ವತಿಯಿಂದ ಮಂಗಳೂರಿನ ಅತಿದೊಡ್ಡ ಚಾಕೊಲೇಟ್ ಹಬ್ಬ ʻಚಾಕೊಲೇಟ್ ಸ್ಟ್ರೀಟ್-2026′ ಇದೇ ಏಪ್ರಿಲ್ 11 ಮತ್ತು 12 ರಂದು ನಗರದ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಜರುಗಲಿದೆ ಎಂದು ಸಂಸ್ಥೆಯ ಉಪನ್ಯಾಸಕಿ ಮೌಲ್ಯ ಜೀವನ್ ಅವರು ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜನಪ್ರಿಯ ಉತ್ಸವವು ಇದೀಗ 7ನೇ ವರ್ಷಕ್ಕೆ ಕಾಲಿಡುತ್ತಿದೆ. ಏಪ್ರಿಲ್ 11 ರಂದು ಬೆಳಿಗ್ಗೆ 10:30ಕ್ಕೆ ʻಸೋಲ್ಸ್’ ಚಾಕೊಲೇಟ್ ಸಂಸ್ಥೆಯ ಸ್ಥಾಪಕರಾದ ಮಯೂರ್ ಶೆಟ್ಟಿ ಅವರು ಈ ಮೇಳವನ್ನು ಉದ್ಘಾಟಿಸಲಿದ್ದಾರೆ. ಚಾಕೊಲೇಟ್ ಪ್ರಿಯರನ್ನು ಒಂದೆಡೆ ಸೇರಿಸುವ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ ಎಂದರು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಈ ಬಾರಿಯ ವಿಶೇಷವೆಂದರೆ, ಭಾರತದ ಪ್ರತಿಷ್ಠಿತ ಸಹಕಾರಿ ಸಂಸ್ಥೆ ʻಕ್ಯಾಂಪ್ಕೋ’ (CAMPCO) ಈ ಮೇಳಕ್ಕೆ ಬೆಂಬಲ ನೀಡುತ್ತಿದೆ. ಗೃಹ ಆಧಾರಿತ ಬೇಕರಿ ತಯಾರಕರು (Home Bakers) ಮತ್ತು ಸಣ್ಣ ಉದ್ಯಮಿಗಳು ತಮ್ಮ ಚಾಕೊಲೇಟ್ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳೇ ಈ ಸಂಪೂರ್ಣ ಮೇಳವನ್ನು ಆಯೋಜಿಸಿ ನಿರ್ವಹಿಸುತ್ತಿರುವುದು ಅವರ ಉದ್ಯಮಶೀಲತಾ ಕೌಶಲಕ್ಕೆ ಸಾಕ್ಷಿಯಾಗಿದೆ ಎಂದು ಮೌಲ್ಯ ಜೀವನ್ ವಿವರಿಸಿದರು.

ಉತ್ಸವದ ಎರಡು ದಿನಗಳ ಕಾಲ ವಿವಿಧ ಮನರಂಜನಾ ಆಟಗಳು ಹಾಗೂ ಕಲಾವಿದರಿಗಾಗಿ ಓಪನ್ ಮೈಕ್ ಸ್ಪರ್ಧೆಗಳು ನಡೆಯಲಿವೆ. ಈ ವರ್ಷದ ವಿಶೇಷ ಆಕರ್ಷಣೆಯಾಗಿ ʻಬೆನ್ನಿ’ ಎಂಬ ಹೆಸರಿನ ಅಧಿಕೃತ ಲಾಂಛನ (Mascot) ಬಿಡುಗಡೆ ಮಾಡಲಾಗಿದ್ದು, ಇದು ಮಕ್ಕಳ ಮತ್ತು ಯುವಜನತೆಯ ಗಮನ ಸೆಳೆಯಲಿದೆ. ಚಾಕೊಲೇಟ್ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿಶಿಷ್ಟ ಸಿಹಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಫ್ಯಾಕಲ್ಟಿ ಕೋ-ಆರ್ಡಿನೇಟರ್ ಪ್ರಕಾಶ್ ಹಾಗೂ ವಿದ್ಯಾರ್ಥಿ ಸಂಘಟಕರಾದ ಹಲೀಮಾ ಶಿಜಾ ಮತ್ತು ರಾಹುಲ್ ವಿ. ಬಿ. ಉಪಸ್ಥಿತರಿದ್ದರು.

error: Content is protected !!