ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಘೋಷಣೆಯಾಗಿರುವ 14 ದಿನಗಳ ಕದನವಿರಾಮವು ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ಬಿಕ್ಕಟ್ಟಿಗೆ ಸಿಲುಕಿದೆ. ಜಗತ್ತು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲೇ, ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಗೊಂದಲವು ಈ ಶಾಂತಿ ಒಪ್ಪಂದವು ಅಲ್ಪಾಯುಷಿಯೇ ಎಂಬ ಅನುಮಾನವನ್ನು ಮೂಡಿಸಿದೆ.

ಕದನವಿರಾಮದ ಪ್ರಮುಖ ಷರತ್ತೇ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದು. ಆದರೆ, ಸದ್ಯ ಅಲ್ಲಿ ಸುಮಾರು 800ಕ್ಕೂ ಹೆಚ್ಚು ಹಡಗುಗಳು ಸಿಲುಕಿಕೊಂಡಿದ್ದು, ಇರಾನ್ ತನ್ನ ಸೇನಾ ನಿಯಂತ್ರಣವನ್ನು ಸಡಿಲಗೊಳಿಸಲು ನಿರಾಕರಿಸುತ್ತಿದೆ. ಇದು ಟ್ರಂಪ್ ಆಡಳಿತವನ್ನು ಕೆರಳಿಸಿದ್ದು, “ಷರತ್ತು ಪಾಲನೆಯಾಗದಿದ್ದರೆ ಕದನವಿರಾಮಕ್ಕೆ ಅರ್ಥವಿಲ್ಲ” ಎಂಬ ಸಂದೇಶ ರವಾನೆಯಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನವಿರಾಮಕ್ಕೆ ಒಪ್ಪಿಕೊಂಡರೂ, ಇರಾನ್ ತನ್ನ ʻ10 ಅಂಶಗಳ’ ಬೇಡಿಕೆಗೆ ಪಟ್ಟು ಹಿಡಿದಿದೆ. ಇತ್ತ ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ, “ನಮ್ಮ ಕೈಗಳು ಟ್ರಿಗ್ಗರ್ ಮೇಲೆಯೇ ಇವೆ” ಎಂದು ಎಚ್ಚರಿಸಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಈ ಪರಸ್ಪರ ಅಪನಂಬಿಕೆಯು ಕದನವಿರಾಮವು ಯಾವುದೇ ಕ್ಷಣದಲ್ಲಿ ಮುರಿದು ಬೀಳುವಂತೆ ಮಾಡಿದೆ.
ಏಪ್ರಿಲ್ 10 ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಸಂಧಾನ ಸಭೆಯ ಮೇಲೆ ಎಲ್ಲರ ಕಣ್ಣಿದೆ. ಅಲ್ಲಿ ಹಾರ್ಮುಜ್ ಜಲಸಂಧಿಯ ಸಂಚಾರಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಒಪ್ಪಂದವಾಗದಿದ್ದರೆ, ಎರಡು ವಾರಗಳ ಈ ಬಿಡುವು ಮತ್ತೆ ಮಹಾಯುದ್ಧಕ್ಕೆ ತಿರುಗುವ ಸಾಧ್ಯತೆ ದಟ್ಟವಾಗಿದೆ.

ಒಂದೆಡೆ ಯುದ್ಧದ ಕಾರ್ಮೋಡ, ಇನ್ನೊಂದೆಡೆ ಸಮುದ್ರದ ಮಧ್ಯೆ ನಿಂತಿರುವ 800 ಹಡಗುಗಳು. ಇವುಗಳಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ತೈಲ ಮತ್ತು ಸರಕುಗಳು ಮಾರುಕಟ್ಟೆಗೆ ತಲುಪದಿದ್ದರೆ ವಿಶ್ವದಾದ್ಯಂತ ಬೆಲೆ ಏರಿಕೆಯ ಸುನಾಮಿ ಏಳಲಿದೆ. ಒಟ್ಟಿನಲ್ಲಿ, ಈ ಕದನವಿರಾಮವು ಶಾಂತಿಯ ಹಾದಿಯೋ ಅಥವಾ ಮುಂದಿನ ದೊಡ್ಡ ಸ್ಫೋಟಕ್ಕೆ ಮುನ್ನ ಇರುವ ಮೌನವೋ ಎಂಬುದು ಮುಂದಿನ 48 ಗಂಟೆಗಳಲ್ಲಿ ನಿರ್ಧಾರವಾಗಲಿದೆ.