ನವದೆಹಲಿ: ಕಳೆದ 39 ದಿನಗಳಿಂದ ಇಡೀ ವಿಶ್ವವನ್ನೇ ನಡುಗಿಸಿದ್ದ ಇರಾನ್ ಮತ್ತು ಅಮೆರಿಕ ನಡುವಿನ ಭೀಕರ ಯುದ್ಧಕ್ಕೆ ಈಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ, ಅಮೆರಿಕದೊಂದಿಗೆ ಎರಡು ವಾರಗಳ ಕದನ ವಿರಾಮಕ್ಕೆ ಸಮ್ಮತಿಸಿದ್ದು, ತಮ್ಮ ಎಲ್ಲಾ ಸೈನ್ಯಗಳಿಗೆ ಗುಂಡು ಹಾರಿಸುವುದನ್ನು ನಿಲ್ಲಿಸುವಂತೆ ಆದೇಶಿಸಿದ್ದಾರೆ. ಆದರೆ, “ಇದು ಯುದ್ಧದ ಅಂತ್ಯವಲ್ಲ” ಎಂದು ಎಚ್ಚರಿಸುವ ಮೂಲಕ ಇರಾನ್ ತನ್ನ ಬಿಗಿ ನಿಲುವನ್ನು ಮುಂದುವರಿಸಿದೆ.

ಟ್ರಿಗ್ಗರ್ ಮೇಲೆ ಇರಾನ್ ಬೆರಳು!
ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿ ಅತ್ಯಂತ ಕಠಿಣ ಸಂದೇಶ ರವಾನಿಸಿದೆ. “ನಮ್ಮ ಕೈಗಳು ಇನ್ನೂ ಟ್ರಿಗ್ಗರ್ ಮೇಲೆಯೇ ಇವೆ. ಶತ್ರು ದೇಶಗಳಾದ ಅಮೆರಿಕ ಅಥವಾ ಇಸ್ರೇಲ್ ಸಣ್ಣ ತಪ್ಪು ಮಾಡಿದರೂ ನಾವು ಸುಮ್ಮನಿರುವುದಿಲ್ಲ, ಪೂರ್ಣ ಶಕ್ತಿಯೊಂದಿಗೆ ತಿರುಗೇಟು ನೀಡುತ್ತೇವೆ” ಎಂದು ಗುಡುಗಿದೆ. ಯುದ್ಧದ ಬಹುತೇಕ ಗುರಿಗಳನ್ನು ಸಾಧಿಸಿದ್ದೇವೆ ಎಂದು ಹೇಳಿಕೊಂಡಿರುವ ಇರಾನ್, ಇದನ್ನು “ಶತ್ರುವಿನ ಶರಣಾಗತಿ” ಎಂದು ಬಣ್ಣಿಸಿದೆ.
ಇರಾನ್‌ನ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳ ಮೇಲೆ ದಾಳಿ ಮಾಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವು ಮುಗಿಯಲು ಕೇವಲ ಎರಡು ಗಂಟೆಗಳಿರುವಾಗ ಈ ಕದನ ವಿರಾಮ ಘೋಷಣೆಯಾಗಿದೆ. ಪಾಕಿಸ್ತಾನದ ಸಂಧಾನ ಪ್ರಸ್ತಾಪವನ್ನು ಒಪ್ಪಿಕೊಂಡಿರುವ ಟ್ರಂಪ್, “ಇದು ದೀರ್ಘಕಾಲದ ಶಾಂತಿಗೆ ಮೊದಲ ಹೆಜ್ಜೆ” ಎಂದಿದ್ದಾರೆ. ಆದರೆ, ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮತ್ತು ಸುರಕ್ಷಿತವಾಗಿ ತೆರೆಯುವುದು ಈ ಒಪ್ಪಂದದ ಪ್ರಮುಖ ಷರತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇರಾನ್ ಇಟ್ಟಿರುವ ’10 ಅಂಶಗಳ’ ಬೇಡಿಕೆ ಏನು?
ಶಾಂತಿ ಮಾತುಕತೆಗಾಗಿ ಇರಾನ್ ಒಂದು ಸುದೀರ್ಘ ಬೇಡಿಕೆ ಪಟ್ಟಿಯನ್ನೇ ಅಮೆರಿಕದ ಮುಂದಿಟ್ಟಿದೆ:
ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ಸಂಪೂರ್ಣ ನಿಯಂತ್ರಣ ಇರಬೇಕು.
ಮಧ್ಯಪ್ರಾಚ್ಯದ ಎಲ್ಲಾ ನೆಲೆಗಳಿಂದ ಅಮೆರಿಕದ ಸೈನ್ಯ ವಾಪಸ್ ಹೋಗಬೇಕು.
ಇರಾನ್ ಮೇಲೆ ಹೇರಲಾಗಿರುವ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸಬೇಕು.
ಯುದ್ಧದಿಂದಾದ ನಷ್ಟಕ್ಕೆ ಅಮೆರಿಕ ಪರಿಹಾರ ನೀಡಬೇಕು.

ಏಪ್ರಿಲ್ 10: ಇಸ್ಲಾಮಾಬಾದ್‌ನಲ್ಲಿ ಹೈ-ವೋಲ್ಟೇಜ್ ಸಭೆ
ಈ ಕದನ ವಿರಾಮದ ಮುಂದಿನ ಭವಿಷ್ಯ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಿರ್ಧಾರವಾಗಲಿದೆ. ಏಪ್ರಿಲ್ 10ರ ಶುಕ್ರವಾರದಿಂದ ಎರಡು ವಾರಗಳ ಕಾಲ ಈ ಹೈ-ವೋಲ್ಟೇಜ್ ಮಾತುಕತೆ ನಡೆಯಲಿದ್ದು, ಜಗತ್ತು ಕುತೂಹಲದಿಂದ ಈ ಕಡೆ ನೋಡುತ್ತಿದೆ.