ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ರಾಜ್ಯದ 4 ಕಡೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳ್ಳಾರಿ, ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಚಿತ್ರದುರ್ಗದಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಶೀಲಮ್ಮ ವರ್ಷದ ಹಿಂದೆ ವಿಆರ್‌ಎಸ್ ಪಡೆದಿದ್ದರು. ಅಕೌಂಟೆಂಟ್ ಆಗಿದ್ದ ವೇಳೆ ಸುಶೀಲಮ್ಮ ಭ್ರಷ್ಟಾಚಾರ ಮಾಡಿದ್ದು, ಆದಾಯ ಮೀರಿ ಹಣ, ಆಸ್ತಿ ಗಳಿಕೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಚಿತ್ರದುರ್ಗದ ಮೆದೇಹಳ್ಳಿ ಬಡಾವಣೆಯ ಮನೆ, ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮದ ತೋಟದ ಮನೆ ಮೇಲೆ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಅಲ್ಲದೇ ಬಳ್ಳಾರಿಯಲ್ಲಿ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶಿವಣ್ಣ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಬಳ್ಳಾರಿಯ ಕಚೇರಿ, ಸಿದ್ಧಾರ್ಥ್ ನಗರದ ಮನೆ ಸೇರಿದಂತೆ ಒಟ್ಟು ನಾಲ್ಕು ಕಡೆ ದಾಳಿ ನಡೆಸಲಾಗಿದೆ. ಹಲವು ಆರೋಪದ ಹಿನ್ನೆಲೆ ಶಿವಣ್ಣ ಮೇಲೆ ದೂರುಗಳಿದ್ದವು. ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಆರೋಪದ ಹಿನ್ನೆಲೆ ದಾಳಿ ನಡೆಸಲಾಗಿದೆ. ಅಧಿಕಾರಿ ಶಿವಣ್ಣ ಬಳಸುವ ಸರ್ಕಾರಿ ಬೊಲೆರೋ ಕಾರನ್ನೂ ಬಿಡದೇ ಪರಿಶೀಲನೆ ನಡೆಸಲಾಗುತ್ತಿದೆ. ನಾಲ್ಕು ಜನ ಅಧಿಕಾರಿಗಳು ಬೊಲೆರೋ ತಲಾಶ್ ನಡೆಸಿದ್ದಾರೆ. ಈ ವೇಳೆ ಬೊಲೆರೋದಲ್ಲಿರುವ ಸಿಕ್ಕ ಕೆಲವು ದಾಖಲೆಗಳನ್ನ ಹೆಕ್ಕಿ ತೆಗೆದು ಪರಿಶೀಲನೆಗೆ ಕೊಂಡೊಯ್ದಿದ್ದಾರೆ. ಎರಡು ತಂಡಗಳಾಗಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇನ್ನು ಆದಾಯಕ್ಕೂ ಮೀರಿ ಗಳಿಕೆ ಆರೋಪದ ಹಿನ್ನೆಲೆ ಲೋಕೋಪಯೋಗಿ ಇಲಾಖೆ ಎಇಇ ರೇವಣ್ಣ ಮನೆ ಹಾಗೂ ಕಚೇರಿಯಲ್ಲಿ ಮೈಸೂರು ಲೋಕಾಯುಕ್ತ ಕಾರ್ಯಾಚರಣೆ ನಡೆಸಿದೆ. ಮೈಸೂರಿನ ಕಚೇರಿ ಹಾಗೂ ಮಂಡ್ಯದ ಎರಡು ನಿವಾಸದಲ್ಲಿ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್‌ಪಿ ಟಿಜೆ ಉದೇಶ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ.ಕೆ.ಆರ್ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆಸಿದೆ. ಶಿವಮೊಗ್ಗ, ಶಿಕಾರಿಪುರ ಹಾಗೂ ಸಾಗರದಲ್ಲಿ ದಾಳಿ ಮಾಡಲಾಗಿದೆ. ಶಿಕಾರಿಪುರ ಪಟ್ಟಣದ ಚೆನ್ನಕೇಶವ ನಗರದಲ್ಲಿನ ಶೋಭಾ ಮನೆ ಮೇಲೆ ದಾಳಿ ನಡೆಸಿದ್ದು, ಶಿಕಾರಿಪುರ ತಾಲೂಕು ತರಲಘಟ್ಟ ಬಳಿಯ 4 ಎಕರೆ ತೋಟ ಹಾಗೂ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದೆ. ಶೋಭಾ ಅವರ ಒಡೆತನದ ಸಾಗರ ತಾಲೂಕಿನ ಅಚಾಪುರ ಬಳಿಯ ಶಾಲೆ ಮೇಲೂ ದಾಳಿ ಮಾಡಲಾಗಿದೆ. ಶಿವಮೊಗ್ಗದ ನಗರದ ನವಿಲೆ ಬಳಿಯ ಮನೆಯಲ್ಲೂ ದಾಖಲೆ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಶಿವಮೊಗ್ಗ ನಗರದ ಕೆಇಬಿ ಸರ್ಕಲ್ ಬಳಿಯ ಬಿಸಿಎಂ ಜಿಲ್ಲಾ ಕಚೇರಿ ಮೇಲೂ ದಾಳಿ ಮಾಡಲಾಗಿದೆ.
ಬಿಸಿಎಂ ಇಲಾಖೆಯ ರಾಘವೇಂದ್ರ ಎಂಬವರ ಮನೆ ಮೇಲೆ ಸಹ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶಿವಮೊಗ್ಗ ನಗರದ ಗೋಪಾಳ ಬಳಿಯ ಚಾಲುಕ್ಯನಗರದಲ್ಲಿನ ಮನೆಯಲ್ಲಿ ಬೆಳಗ್ಗೆಯಿಂದಲೂ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. 5 ತಂಡವಾಗಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ದಾವಣಗೆರೆ ಎಸ್ಪಿ ನೇತೃತ್ವದಲ್ಲಿ ಲೋಕಾ ಟೀಂ ದಾಳಿ ನಡೆಸಿದ್ದು, ಶಿವಮೊಗ್ಗ ಜೊತೆಗೆ ಹಾವೇರಿ, ದಾವಣಗೆರೆ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ.