ಯುದ್ಧಗ್ರಸ್ತ ಹೊರ್ಮುಜ್ ಜಲಸಂಧಿ ದಾಟಿದ ಭಾರತದ ಮತ್ತೆರಡು ಎಲ್‌ಪಿಜಿ ಟ್ಯಾಂಕರ್‌ಗಳು: 16 ಹಡಗುಗಳು ಇನ್ನೂ ಅತಂತ್ರ

ನವದೆಹಲಿ: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡದ ನಡುವೆಯೂ ಭಾರತದ ಎರಡು ಪ್ರಮುಖ ಎಲ್‌ಪಿಜಿ ಟ್ಯಾಂಕರ್‌ಗಳು ಹೊರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತದ ಬಂದರುಗಳತ್ತ ಮುನ್ನುಗ್ಗಿವೆ ಎಂದು ಕೇಂದ್ರ ಬಂದರು ಮತ್ತು ಹಡಗು ಸಚಿವಾಲಯ ತಿಳಿಸಿದೆ.

ಸುರಕ್ಷಿತವಾಗಿ ಹೊರಬಂದ ಹಡಗುಗಳು:
ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಖೇಶ್ ಮಂಗಲ್ ಅವರು ನೀಡಿದ ಮಾಹಿತಿ ಪ್ರಕಾರ, ʻಗ್ರೀನ್ ಸಾನ್ವಿ’ (46,650 ಟನ್ ಎಲ್‌ಪಿಜಿ ಹೊತ್ತೊಯ್ಯುತ್ತಿರುವ) ಹಡಗು ಇಂದು (ಏಪ್ರಿಲ್ 7) ಭಾರತದ ಬಂದರನ್ನು ತಲುಪುವ ನಿರೀಕ್ಷೆಯಿದೆ. ಮತ್ತೊಂದು ಹಡಗು ʻಗ್ರೀನ್ ಆಶಾ’ (15,500 ಟನ್ ಎಲ್‌ಪಿಜಿ) ಏಪ್ರಿಲ್ 9 ರಂದು ಭಾರತದ ಕರಾವಳಿಯನ್ನು ಮುಟ್ಟಲಿದೆ. ಇದರೊಂದಿಗೆ ಯುದ್ಧ ಆರಂಭವಾದ ನಂತರ ಒಟ್ಟು ಎಂಟು ಭಾರತೀಯ ಎಲ್‌ಪಿಜಿ ಟ್ಯಾಂಕರ್‌ಗಳು ಈ ಅಪಾಯಕಾರಿ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದಂತಾಗಿದೆ.

ಫೆಬ್ರವರಿ 28 ರಿಂದ ಆರಂಭವಾದ ಈ ಯುದ್ಧದ ಹಿನ್ನೆಲೆಯಲ್ಲಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ತನ್ನ ‘ಶತ್ರು’ ರಾಷ್ಟ್ರಗಳಿಗೆ (ಅಮೆರಿಕ ಮತ್ತು ಮಿತ್ರರಾಷ್ಟ್ರಗಳು) ಬಂದ್ ಮಾಡಿದೆ. ಆದರೆ ಭಾರತದಂತಹ ‘ಸ್ನೇಹಿ’ ರಾಷ್ಟ್ರಗಳ ಹಡಗುಗಳಿಗೆ ಸಮನ್ವಯದೊಂದಿಗೆ ಸಂಚರಿಸಲು ಅವಕಾಶ ನೀಡುತ್ತಿದೆ. “ಭಾರತೀಯ ಮಿತ್ರರು ಹೊರ್ಮುಜ್ ಬಗ್ಗೆ ಚಿಂತಿಸಬೇಕಿಲ್ಲ” ಎಂದು ಇರಾನ್ ಈ ಹಿಂದೆಯೇ ಭರವಸೆ ನೀಡಿತ್ತು.

ಇನ್ನೂ ಸಿಲುಕಿರುವ 16 ಹಡಗುಗಳು:
ಹೊರ್ಮುಜ್ ದಾಟಲು ಯಶಸ್ವಿಯಾಗಿದ್ದರೂ, ಇನ್ನೂ 16 ಭಾರತೀಯ ಧ್ವಜ ಹೊಂದಿರುವ ಹಡಗುಗಳು ಮತ್ತು 433 ನಾವಿಕರು ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿದ್ದಾರೆ. ಇವುಗಳಲ್ಲಿ 6 ಕಚ್ಚಾ ತೈಲ ವಾಹಕಗಳು (Crude Carrierş) 2 ಎಲ್‌ಪಿಜಿ ಟ್ಯಾಂಕರ್‌ಗಳು , 1 ಎಲ್‌ಎನ್‌ಜಿ ಹಡಗು, 3 ಕಂಟೈನರ್ ಹಡಗುಗಳು ಹಾಗೂ ಕೆಮಿಕಲ್ ಕಾರ್ಗೋಗಳು ಸೇರಿವೆ.

ಸುಂಕ ವಸೂಲಿ ವಿವಾದ:
ಇರಾನ್ ಹಡಗುಗಳ ಸಂಚಾರಕ್ಕೆ ಹಣ ವಸೂಲಿ ಮಾಡುತ್ತಿದೆ ಎಂಬ ವರದಿಗಳನ್ನು ಸಚಿವಾಲಯ ನಿರಾಕರಿಸಿದೆ. ಆದರೆ, ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ನಾವು ಯುದ್ಧ ಗೆದ್ದಿದ್ದೇವೆ, ಹೊರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರಕ್ಕಾಗಿ ನಾವು ಸುಂಕ (Toll) ವಸೂಲಿ ಮಾಡಬಾರದೇಕೆ?” ಎಂದು ಪ್ರಶ್ನಿಸಿರುವುದು ಜಾಗತಿಕ ವಾಣಿಜ್ಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಭಾರತೀಯ ಹಡಗುಗಳ ಸಂಚಾರಕ್ಕೆ ಯಾವುದೇ “ಒಟ್ಟಾರೆ ಒಪ್ಪಂದ” ಆಗಿಲ್ಲ ಮತ್ತು ಇರಾನ್‌ಗೆ ಪ್ರತಿಯಾಗಿ ಏನನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಭಾರತೀಯ ನೌಕಾಪಡೆಯು ಈ ಭಾಗದಲ್ಲಿ ಹಡಗುಗಳ ಸುರಕ್ಷತೆಯ ಮೇಲೆ ನಿಗಾ ಇರಿಸಿದೆ.

error: Content is protected !!