ಚಂದಿರನ ಆಚೆಗೂ ಚಾಚಿದ ಮನುಷ್ಯನ ಹೆಜ್ಜೆ: 56 ವರ್ಷಗಳ ಹಳೆಯ ದಾಖಲೆ ಪುಡಿಪುಡಿ ಮಾಡಿದ ನಾಸಾ!

ವಾಷಿಂಗ್ಟನ್: ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ನಾಸಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಆರ್ಟೆಮಿಸ್ II ಮಿಷನ್‌ನಲ್ಲಿರುವ ನಾಲ್ವರು ಗಗನಯಾತ್ರಿಗಳು ಸೋಮವಾರ ಮಧ್ಯಾಹ್ನ ಭೂಮಿಯಿಂದ ಸುಮಾರು 2,48,655 ಮೈಲಿ ದೂರ ತಲುಪುವ ಮೂಲಕ, ಮಾನವಕುಲವು ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ದೂರ ಕ್ರಮಿಸಿದ ಹೊಸ ದಾಖಲೆಯನ್ನು ಬರೆದಿದ್ದಾರೆ.

ಈ ಸಾಧನೆಯೊಂದಿಗೆ 1970ರಲ್ಲಿ ಅಪ್ರತಿಮ ಸಾಹಸ ಮೆರೆದಿದ್ದ ʻಅಪೊಲೊ 13′ ಮಿಷನ್‌ನ ದಾಖಲೆಯನ್ನು ಆರ್ಟೆಮಿಸ್ ತಂಡವು ಮುರಿದಿದೆ. ನಾಸಾದ ರೀಡ್ ವೈಸ್‌ಮನ್, ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಈ ಐತಿಹಾಸಿಕ ಯಾನದ ಭಾಗವಾಗಿದ್ದಾರೆ. ಏಪ್ರಿಲ್ 1 ರಂದು ಫ್ಲೋರಿಡಾದಿಂದ ಇವರು ತಮ್ಮ ಪಯಣ ಆರಂಭಿಸಿದ್ದರು.

ಪ್ರಸ್ತುತ ಗಗನಯಾತ್ರಿಗಳು ʻಓರಿಯನ್’ ಬಾಹ್ಯಾಕಾಶ ನೌಕೆಯ ವಿವಿಧ ತಾಂತ್ರಿಕ ವ್ಯವಸ್ಥೆಗಳನ್ನು ಆಳವಾದ ಬಾಹ್ಯಾಕಾಶದಲ್ಲಿ (Deep Space) ಪರೀಕ್ಷಿಸುತ್ತಿದ್ದಾರೆ. ನೌಕೆಯ ಜೀವ ರಕ್ಷಕ ವ್ಯವಸ್ಥೆ, ಸಂವಹನ, ಇಂಧನ ಚಾಲನೆ ಮತ್ತು ನ್ಯಾವಿಗೇಷನ್ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸುವುದು ಈ ಮಿಷನ್‌ನ ಪ್ರಮುಖ ಉದ್ದೇಶವಾಗಿದೆ. ಇದರೊಂದಿಗೆ ಚಂದ್ರನ ಮೇಲ್ಮೈ ವೀಕ್ಷಣೆ ಮತ್ತು ಮಾನವ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಸಂಶೋಧನೆ ನಡೆಸಲಾಗುತ್ತಿದೆ.

ಈ ಮಿಷನ್ ಕೇವಲ ದೂರದ ದಾಖಲೆಯಷ್ಟೇ ಅಲ್ಲದೆ, ಭವಿಷ್ಯದಲ್ಲಿ ಚಂದ್ರನ ಮೇಲೆ ಮನುಷ್ಯರು ನೆಲೆಸಲು ಬೇಕಾದ ಪೂರ್ವತಯಾರಿಯಾಗಿದೆ. ಗಗನಯಾತ್ರಿಗಳು ಚಂದ್ರನ ಅಂತರದಿಂದ ಭೂಮಿಯೊಂದಿಗೆ ಸಂವಹನ ನಡೆಸುವ ಮತ್ತು ತುರ್ತು ಸಂದರ್ಭದಲ್ಲಿ ನೌಕೆಯನ್ನು ಸ್ವತಃ ನಿಯಂತ್ರಿಸುವ ಮಹತ್ವದ ಅಭ್ಯಾಸಗಳನ್ನು ಮಾಡುತ್ತಿದ್ದಾರೆ.

ತಮ್ಮ ಹತ್ತು ದಿನಗಳ ಈ ಸುದೀರ್ಘ ಪಯಣವನ್ನು ಮುಕ್ತಾಯಗೊಳಿಸಲಿರುವ ಈ ತಂಡವು, ಏಪ್ರಿಲ್ 10 ರಂದು ಶುಕ್ರವಾರ ರಾತ್ರಿ ಸ್ಯಾನ್ ಡಿಯಾಗೋ ಕರಾವಳಿಯ ಸಮುದ್ರದಲ್ಲಿ ಇಳಿಯಲಿದೆ. ಈ ಪರೀಕ್ಷಾರ್ಥ ಯಾನದ ಯಶಸ್ಸು ಮುಂದಿನ ದಿನಗಳಲ್ಲಿ ಮಾನವನನ್ನು ಮತ್ತೆ ಚಂದ್ರನ ಮೇಲೆ ಇಳಿಸುವ ನಾಸಾದ ಮಹತ್ವಾಕಾಂಕ್ಷೆಯ ಯೋಜನೆಗೆ ಭದ್ರ ಬುನಾದಿ ಹಾಕಲಿದೆ.

error: Content is protected !!