
ದಾವಣಗೆರೆ: “ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಗ್ಯಾಸ್ ಸಿಗದೇ ಹೋಟೆಲ್ ಗಳು ಬಂದ್ ಆಗುತ್ತಿವೆ. ಆಟೋದವರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಬಿಜೆಪಿ ನಿರ್ಮಾಣ ಮಾಡಿದೆ. ಬಿಜೆಪಿ ಕಾರ್ಯಕರ್ತರು ಸಹ ಬೆಲೆ ಏರಿಕೆಗೆ ಬಸವಳಿದಿರುವುದರಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕು“ ಎಂದು ವಿಧಾನ ಪರಿಷತ್ ಶಾಸಕ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಗ್ಯಾಸ್ ಬೆಲೆ 400 ರೂ. ಆಸುಪಾಸಿನಲ್ಲಿತ್ತು. ಈಗ ಎಲ್ ಪಿಜಿ ಸಿಲಿಂಡರ್ ಬೆಲೆ 950 ರೂ. ದಾಟಿದೆ. ಲೀಟರ್ ಗೆ 70 ರೂಪಾಯಿಯಿದ್ದ ಪೆಟ್ರೋಲ್ ಈಗ 102ರ ಗಡಿ ದಾಟಿದೆ. ಡೀಸೆಲ್ 56 ರೂಪಾಯಿಂದ 96ಕ್ಕೆ ಜಿಗಿದಿದೆ. ಹೆದ್ದಾರಿ ಟೋಲ್ ದರ ಹೆಚ್ಚಳ ಮಾಡಲಾಗಿದೆ. ಗ್ಯಾಸ್ ಸಿಗದೆ ಹೋಟೆಲ್ ಉದ್ಯಮ ನೆಲ ಕಚ್ಚುವಂತೆ ಮಾಡಿರುವ ಹಾನಿಕಾರಕ ಪಕ್ಷ ಬಿಜೆಪಿಗೆ ಅವರದ್ದೇ ಪಕ್ಷದ ಕಾರ್ಯಕರ್ತರು ಈ ಉಪಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಬೇಕು.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಮಾಧ್ಯಮದ ಮುಂದೆ ಹೇಳಿಕೆ ನೀಡುವ ಬದಲು ಪ್ರಧಾನಿ ಮೋದಿ ಅವರ ಬಳಿ ಮಾತನಾಡಿ ಕರ್ನಾಟಕಕ್ಕೆ ಬರಬೇಕಿದ್ದ ತೆರಿಗೆ ಪಾಲು ಕೊಡಿಸುವ ಕೆಲಸವನ್ನು ಮೊದಲು ಮಾಡಲಿ. 5 ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ. ತೆರಿಗೆ ಹಣ ಕರ್ನಾಟಕಕ್ಕೆ ಬರಬೇಕಿತ್ತು. 15ನೇ ಹಣಕಾಸು ಆಯೋಗದ ಅನುದಾನ ಬಾಕಿಯಿದೆ. ಜಲಜೀವನ್ ಮಿಷನ್ ಅನುದಾನ, ಮಹಾದಾಯಿ ಯೋಜನೆಗೆಂದು ಘೋಷಣೆ ಮಾಡಿದ್ದ ಅನುದಾನ ಕೊಡಿಸುವ ಕೆಲಸವನ್ನು ಮಾಡಲಿ ಎಂದವರು ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅಪಾರ. ದಾವಣಗೆರೆ ನಗರವನ್ನು ವಿದ್ಯಾ ನಗರಿಯನ್ನಾಗಿ ಮಾಡಿದ ಗರಿಮೆ ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ. ಕ್ಷೇತ್ರದ ಮತದಾರರು ಶಾಮನೂರು ಶಿವಶಂಕರಪ್ಪ ಅವರ ಕಾರ್ಯವನ್ನು ಸದಾ ಸ್ಮರಿಸುತ್ತಾರೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಶಿವಶಂಕರಪ್ಪ ಅವರ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಕೈ ಹಿಡಿಯಲಿ.
ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ಇಡೀ ದೇಶಕ್ಕೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾಡೆಲ್ ಆಗಿದೆ. ನಮ್ಮದ್ದು ಜನಪರ ಪಕ್ಷವಾದರೆ ಬಿಜೆಪಿಯವರದ್ದು ಕಾರ್ಪೊರೇಟ್ ಕಂಪನಿಗಳ ಪರವಾದ ಸರ್ಕಾರ. ಅಂಬಾನಿ, ಅದಾನಿ ಅವರ ಹಿತಾಸಕ್ತಿಯೇ ಅವರಿಗೆ ಮುಖ್ಯವಾದರೆ ಕಾಂಗ್ರೆಸ್ ಗೆ ಜನಸಾಮಾನ್ಯರ ಹಿತ ಮುಖ್ಯ.
ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಜೋಶಿ ಅವರು ಮೊದಲು ಯಡಿಯೂರಪ್ಪ ಅವರ ಕುಟುಂಬ ರಾಜಕಾಣ ಹಾಗೂ ಮೈತ್ರಿ ಪಕ್ಷವಾದ ಜೆಡಿಎಸ್ ನ ಕುಟುಂಬ ರಾಜಕಾರಣದ ಬಗ್ಗೆಯೂ ಜನರಿಗೆ ಹೇಳಬೇಕು. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಜೋಶಿ ಅವರಿಗಿಲ್ಲ. ಬಿಜೆಪಿ ಅವರದ್ದು ಜನರನ್ನು ಲೂಟಿ ಮಾಡಲು ಪಕ್ಷವಾದರೆ ಕಾಂಗ್ರೆಸ್ ಜನರ ಕೈ ಹಿಡಿಯುವ, ನುಡಿದಂತೆ ನಡೆಯುವ ಪಕ್ಷ ಎಂದು ಭಂಡಾರಿ ಅವರು ಹೇಳಿದ್ದಾರೆ.