ಥಾರ್ ಮರುಭೂಮಿಯ ಒಡಲಲ್ಲಿ ‘ತೈಲ’ದ ಬೇಟೆಯ ರೋಚಕ ಕತೆ: ಭಾರತದ ಐದು ಸ್ಥಳಗಳಲ್ಲಿ ಸಿಗುತ್ತಿದೆ ಕಪ್ಪು ಚಿನ್ನ!

ನವದೆಹಲಿ: ರಾಜಸ್ಥಾನದ ಆ ವಿಶಾಲವಾದ ಥಾರ್ ಮರುಭೂಮಿಯ ಮರಳಿನ ಪದರಗಳ ಅಡಿಯಲ್ಲಿ ಅದೆಂತಹ ನಿಗೂಢ ಸಂಪತ್ತು ಅಡಗಿದೆ ಎನ್ನುವುದು ಈಗ ಜಗತ್ತಿಗೆ ತಿಳಿಯುತ್ತಿದೆ! ಬರೋಬ್ಬರಿ 35 ವರ್ಷಗಳ ಹಿಂದೆ, ಅಂದರೆ 1991ರಲ್ಲಿ ‘ಬಗೇವಾಲಾ’ ಎಂಬ ಪ್ರದೇಶದಲ್ಲಿ ತೈಲ ನಿಕ್ಷೇಪ ಇರುವುದು ಪತ್ತೆಯಾಗಿತ್ತು. ಆದರೆ, ಅಲ್ಲಿಂದ ತೈಲ ತೆಗೆಯುವುದು ಅಂದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಯಾಕೆ ಗೊತ್ತಾ?

Rajasthan1

ಸಾಮಾನ್ಯವಾಗಿ ಕಚ್ಚಾ ತೈಲ ನೀರನಂತೆ ದ್ರವ ರೂಪದಲ್ಲಿರುತ್ತದೆ. ಆದರೆ ಇಲ್ಲಿನ ತೈಲ ದಪ್ಪವಾಗಿ, ಅಕ್ಷರಶಃ ಜೆಲ್ಲಿಯಂತಿತ್ತು! ಹಳೆಯ ಕಾಲದ ಮೋಟಾರುಗಳನ್ನು ಬಳಸಿ ಇದನ್ನು ಹೊರತೆಗೆಯುವುದು ಅಸಾಧ್ಯದ ಮಾತಾಗಿತ್ತು. ಆದರೆ ಆಯಿಲ್ ಇಂಡಿಯಾ ಲಿಮಿಟೆಡ್‌ನ ಇಂಜಿನಿಯರ್‌ಗಳು ಸೋಲೊಪ್ಪಲಿಲ್ಲ. ಅವರು ಬಳಸಿದ್ದು ʻಸೈಕ್ಲಿಕ್ ಸ್ಟೀಮ್ ಸ್ಟಿಮ್ಯುಲೇಶನ್’ (CSS) ಎಂಬ ಅತ್ಯಾಧುನಿಕ ತಂತ್ರಜ್ಞಾನ. ಭೂಮಿಯ ಆಳಕ್ಕೆ ಬಿಸಿ ಹಬೆಯನ್ನು ಹರಿಸಿ, ಆ ದಪ್ಪಗಿನ ತೈಲವನ್ನು ಕರಗಿಸಿ, ದ್ರವವಾಗಿಸಿ ಮೇಲೆತ್ತುವ ಸಾಹಸವಿದು!

ಇಷ್ಟೇ ಅಲ್ಲ, ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ʻಫಿಶ್‌ಬೋನ್ ಡ್ರಿಲ್ಲಿಂಗ್’ (Fishbone Drilling) ಎಂಬ ತಂತ್ರವನ್ನು ಇಲ್ಲಿ ಬಳಸಲಾಗಿದೆ. ಅಂದರೆ ಮೀನಿನ ಮುಳ್ಳಿನ ಆಕಾರದಲ್ಲಿ ಭೂಮಿಯನ್ನು ಕೊರೆದು, ಮೂಲೆ ಮೂಲೆಗಳಲ್ಲಿ ಅಡಗಿರುವ ತೈಲವನ್ನು ಹೀರುವ ತಂತ್ರವಿದು. ಇದರ ಫಲವಾಗಿ ಕಳೆದ ವರ್ಷ 705 ಬ್ಯಾರೆಲ್ ಉತ್ಪಾದನೆಯಾಗುತ್ತಿದ್ದ ಜಾಗದಲ್ಲಿ ಇಂದು ಬರೋಬ್ಬರಿ 1,202 ಬ್ಯಾರೆಲ್ ತೈಲ ಚಿಮ್ಮುತ್ತಿದೆ! ಇದು ಬರೋಬ್ಬರಿ ಶೇ. 70 ರಷ್ಟು ಏರಿಕೆ.

Rajasthan2

ವಿದೇಶಿ ತೈಲಕ್ಕೆ ಭಾರತದ ಚೆಕ್-ಮೇಟ್!
ಹೀಗೆ ಹೊರತೆಗೆದ ಕಚ್ಚಾ ತೈಲವನ್ನು ಟ್ಯಾಂಕರ್‌ಗಳ ಮೂಲಕ ಗುಜರಾತ್‌ನ ಮೆಹ್ಸಾನಾಕ್ಕೆ ಸಾಗಿಸಿ, ಅಲ್ಲಿಂದ ಪೈಪ್‌ಲೈನ್ ಮೂಲಕ ಸಂಸ್ಕರಣಾಗಾರಕ್ಕೆ ತಲುಪಿಸಲಾಗುತ್ತಿದೆ. 2025-26ರ ಸಾಲಿನಲ್ಲಿ ದಾಖಲೆಯ 43,773 ಮೆಟ್ರಿಕ್ ಟನ್ ತೈಲ ಉತ್ಪಾದಿಸುವ ಮೂಲಕ ಆಯಿಲ್ ಇಂಡಿಯಾ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಒಟ್ಟಿನಲ್ಲಿ, ಮರಳುಗಾಡಿನ ಆ ಸುಡು ಬಿಸಿಲಿನಲ್ಲಿ ಭಾರತದ ಇಂಜಿನಿಯರ್‌ಗಳು ನಡೆಸಿದ ಈ ತಂತ್ರಜ್ಞಾನದ ಹಠಕ್ಕೆ ಈಗ ‘ಕಪ್ಪು ಚಿನ್ನ’ ಒಲಿದಿದೆ. ಇದು ಕೇವಲ ತೈಲ ಉತ್ಪಾದನೆಯಲ್ಲ, ಇಂಧನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಲು ಇಟ್ಟಿರುವ ಬಲಿಷ್ಠ ಹೆಜ್ಜೆ!

ಬಗೇವಾಲಾ ಮಾತ್ರವಲ್ಲ, ಭಾರತದ ಒಡಲಲ್ಲಿದೆ ತೈಲದ ಸಾಗರ! ರಾಜಸ್ಥಾನದ ಥಾರ್ ಮರುಭೂಮಿಯ ಮರಳಿನಡಿಯಲ್ಲಿ ತೈಲ ಚಿಮ್ಮುತ್ತಿರುವ ಸುದ್ದಿ ಕೇಳಿ ಇಡೀ ದೇಶವೇ ಬೆರಗಾಗಿದೆ. ಆದರೆ, ಅಸಲಿ ವಿಷಯವೇನೆಂದರೆ, ಭಾರತದ ಭೂಭಾಗ ಮತ್ತು ಸಮುದ್ರದ ಆಳದಲ್ಲಿ ಇಂತಹ ನೂರಾರು ನಿಕ್ಷೇಪಗಳು ಅಡಗಿವೆ! ನಾವು ವಿದೇಶಿ ತೈಲಕ್ಕೆ ಕೋಟಿ ಕೋಟಿ ಸುರಿಯುತ್ತಿರುವಾಗಲೇ, ನಮ್ಮ ಇಂಜಿನಿಯರ್‌ಗಳು ಭಾರತದ ಮೂಲೆ ಮೂಲೆಗಳಲ್ಲಿ ತೈಲದ ಬೇಟೆಯಾಡುತ್ತಿದ್ದಾರೆ.

ಹಾಗಾದರೆ, ರಾಜಸ್ಥಾನ ಬಿಟ್ಟರೆ ಭಾರತದ ಬೇರೆ ಯಾವ ಯಾವ ಅಂಗಳದಲ್ಲಿ ತೈಲದ ಕಾರಂಜಿ ಇದೆ? ಇಲ್ಲಿದೆ ಒಂದು ರೋಚಕ ನೋಟ:

1. ಅಸ್ಸಾಂನ ದಿಗ್ಬೋಯ್: ತೈಲದ ಇತಿಹಾಸದ ತವರು!
ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ತೈಲ ಸಿಕ್ಕಿದ್ದು ಅಸ್ಸಾಂನ ದಿಗ್ಬೋಯ್‌ನಲ್ಲಿ. ಈಗಲೂ ಅಲ್ಲಿನ ಬ್ರಹ್ಮಪುತ್ರ ನದಿ ಕಣಿವೆಯಲ್ಲಿ ಭಾರಿ ಪ್ರಮಾಣದ ತೈಲ ಉತ್ಪಾದನೆಯಾಗುತ್ತಿದೆ. ಇತ್ತೀಚೆಗೆ ಆಯಿಲ್ ಇಂಡಿಯಾ ಲಿಮಿಟೆಡ್ ಅಲ್ಲಿನ ಹಳೆಯ ಬಾವಿಗಳಿಂದಲೂ ತಂತ್ರಜ್ಞಾನ ಬಳಸಿ ಹೆಚ್ಚು ತೈಲ ತೆಗೆಯುವ ಪ್ರಯತ್ನ ಮಾಡುತ್ತಿದೆ. ಅಸ್ಸಾಂನ ನಹರ್ಕಟಿಯಾ ಮತ್ತು ಮೊರಾನ್ ಪ್ರದೇಶಗಳು ಈಗಲೂ ನಮ್ಮ ತೈಲ ಭದ್ರತೆಯ ಬೆನ್ನೆಲುಬು.

2. ಮುಂಬೈ ಹೈ (Mumbai High): ಸಮುದ್ರದ ಒಳಗೆ ತೈಲದ ಬೃಹತ್ ಕೋಟೆ!
ನಮ್ಮ ದೇಶದ ಒಟ್ಟು ತೈಲ ಉತ್ಪಾದನೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಇಲ್ಲಿಂದಲೇ ಬರುತ್ತದೆ. ಅರೇಬಿಯನ್ ಸಮುದ್ರದ ನಡುವೆ, ಮುಂಬೈ ತೀರದಿಂದ ಸುಮಾರು 170 ಕಿ.ಮೀ ದೂರದಲ್ಲಿ ಸಮುದ್ರದ ತಳವನ್ನು ಕೊರೆದು ತೈಲ ತೆಗೆಯಲಾಗುತ್ತಿದೆ. ಇದು ಭಾರತದ ಅತಿದೊಡ್ಡ ತೈಲ ಕ್ಷೇತ್ರ. ಇತ್ತೀಚೆಗೆ ಒಎನ್‌ಜಿಸಿ (ONGC) ಇಲ್ಲಿ ‘ಸಾಗರ್ ಸಾಮ್ರಾಟ್’ ಎಂಬ ಬೃಹತ್ ಪ್ಲಾಟ್‌ಫಾರ್ಮ್ ಬಳಸಿ ತೈಲ ಉತ್ಪಾದನೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

3. ಕೃಷ್ಣಾ-ಗೋದಾವರಿ ಬೇಸಿನ್ (KG Basin): ಆಂಧ್ರದ ಕರಾವಳಿಯಲ್ಲಿ ಅಡಗಿದೆ ನಿಗೂಢ ಸಂಪತ್ತು!
ಆಂಧ್ರಪ್ರದೇಶದ ಕರಾವಳಿಯ ಆಳಸಮುದ್ರದಲ್ಲಿ ಬೃಹತ್ ತೈಲ ಮತ್ತು ಅನಿಲ ನಿಕ್ಷೇಪಗಳಿವೆ. ಇಲ್ಲಿ ತೈಲ ತೆಗೆಯುವುದು ಅತ್ಯಂತ ಕಷ್ಟದ ಕೆಲಸ, ಯಾಕೆಂದರೆ ಇಲ್ಲಿ ಸಮುದ್ರದ ಆಳ ತುಂಬಾ ಹೆಚ್ಚು. ರಿಲಯನ್ಸ್ ಮತ್ತು ಒಎನ್‌ಜಿಸಿ ಕಂಪನಿಗಳು ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನ ಬಳಸಿ ಇಲ್ಲಿ ತೈಲ ಹೊರತೆಗೆಯಲು ಹರಸಾಹಸ ಪಡುತ್ತಿವೆ.

4. ಗುಜರಾತ್‌ನ ಅಂಕಲೇಶ್ವರ ಮತ್ತು ಅಹಮದಾಬಾದ್:
ಗುಜರಾತ್‌ನ ಕೆಂಬೆ (Cambay) ಬೇಸಿನ್‌ನಲ್ಲಿ ದಶಕಗಳಿಂದ ತೈಲ ತೆಗೆಯಲಾಗುತ್ತಿದೆ. ಅಂಕಲೇಶ್ವರದಲ್ಲಿ ಸಿಗುವ ತೈಲವು ಅತ್ಯಂತ ಉತ್ತಮ ದರ್ಜೆಯದ್ದಾಗಿದ್ದು, ಇದನ್ನು ‘ಚಿನ್ನದ ತೈಲ’ ಎಂದೂ ಕರೆಯಲಾಗುತ್ತದೆ. ಈಗ ಇಲ್ಲಿನ ಹಳೆಯ ನಿಕ್ಷೇಪಗಳನ್ನು ಪುನರುಜ್ಜೀವನಗೊಳಿಸಲು ‘ಎನ್‌ಹಾನ್ಸ್‌ಡ್ ಆಯಿಲ್ ರಿಕವರಿ’ (EOR) ತಂತ್ರಜ್ಞಾನ ಬಳಸಲಾಗುತ್ತಿದೆ.

ಭಾರತ ಸರ್ಕಾರವು ಈಗ ‘ಓಪನ್ ಅಕ್ರೆಜ್ ಲೈಸೆನ್ಸಿಂಗ್ ಪಾಲಿಸಿ’ (OALP) ಎಂಬ ಹೊಸ ನೀತಿಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ  ಹಿಮಾಲಯದ ಕೆಳಭಾಗದಲ್ಲಿ ತೈಲ ಇರುವ ಸಾಧ್ಯತೆ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದ ಸಮುದ್ರ ತೀರಗಳಲ್ಲಿ ಹೊಸ ಬಾವಿಗಳನ್ನು ಕೊರೆಯಲಾಗುತ್ತಿದೆ. ಕೇವಲ ತೈಲ ಮಾತ್ರವಲ್ಲ, ಕಲ್ಲುಗಳ ನಡುವೆ ಸಿಲುಕಿರುವ ಗ್ಯಾಸ್ ಅನ್ನು ಹೊರತೆಗೆಯಲು ಹೈಡ್ರಾಲಿಕ್ ಫ್ರಾಕ್ಚರಿಂಗ್ ಎಂಬ ತಂತ್ರ ಬಳಸಲಾಗುತ್ತಿದೆ.

ಭಾರತವು ಇಂದು ತನ್ನ ಅವಶ್ಯಕತೆಯ ಶೇ. 85 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಥಾರ್ ಮರುಭೂಮಿಯ ಬಗೇವಾಲಾ ಅಥವಾ ಮುಂಬೈ ಹೈನಲ್ಲಿ ನಡೆಯುತ್ತಿರುವ ಈ ತಾಂತ್ರಿಕ ಹೋರಾಟಗಳು ಯಶಸ್ವಿಯಾದರೆ, ಮುಂದೊಂದು ದಿನ ಅರಬ್ ರಾಷ್ಟ್ರಗಳಂತೆ ಭಾರತವೂ ಇಂಧನ ಸ್ವಾವಲಂಬಿಯಾಗುವುದರಲ್ಲಿ ಸಂಶಯವಿಲ್ಲ!

error: Content is protected !!