ಏ.9: ಶ್ರೀರಾಮ್‌ ಫೈನಾನ್ಸ್‌ನಿಂದ ಮಂಗಳೂರಿನಲ್ಲಿ ‘ಶ್ರೀರಾಮ್ ಸಾರಥಿ ಸಂಗಮ’: ವಿಶೇಷ ರಿಯಾಯಿತಿಗಳ ಸುರಿಮಳೆ

ಮಂಗಳೂರು: ಸಾರಿಗೆ ಕ್ಷೇತ್ರದ ಕಾರ್ಮಿಕರು ಮತ್ತು ಮಾಲೀಕರಿಗಾಗಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಏಪ್ರಿಲ್ 9 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ “ಶ್ರೀರಾಮ್ ಸಾರಥಿ ಸಂಗಮ” ಎಂಬ ಬೃಹತ್ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮಂಗಳೂರು ವಲಯದ ಅಧ್ಯಕ್ಷ ಶರಶ್ಚಂದ್ರ ಭಟ್ ಕಾಕುಂಜೆ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 52 ವರ್ಷಗಳಿಂದ ಗ್ರಾಹಕರ ನಂಬಿಕೆಗೆ ಪಾತ್ರವಾಗಿರುವ ಸಂಸ್ಥೆಯು ಈ ಬಾರಿ ಸಾರಿಗೆ ವಲಯದ ಜನರ ಹಿತದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ತಾಂತ್ರಿಕ ಪ್ರದರ್ಶನ ಹಾಗೂ ಸೇವಾ ಚಟುವಟಿಕೆಗಳು ನಡೆಯಲಿವೆ ಎಂದರು.

ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಪ್ರಮುಖ ಬ್ರಾಂಡ್‌ಗಳ ಹೊಸ ವಾಹನಗಳು ಮತ್ತು ಮೆಷಿನರಿಗಳ ಪ್ರದರ್ಶನ ಇರಲಿದೆ. ಅಂದು ಸ್ಥಳದಲ್ಲೇ ವಾಹನ ಬುಕಿಂಗ್ ಮಾಡುವ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರ ಹಾಗೂ ಬಡ್ಡಿದರದಲ್ಲಿ ಸಡಿಲಿಕೆ ನೀಡಲಾಗುವುದು. ಅಲ್ಲದೆ, ಕಂಪನಿಯ ವತಿಯಿಂದ ಸರ್ವಿಸ್ ಚಾರ್ಜ್ ಮೇಲೆ ಶೇ. 50 ರಷ್ಟು ರಿಯಾಯಿತಿ ಸೌಲಭ್ಯವನ್ನೂ ಘೋಷಿಸಲಾಗಿದೆ.

ಸಾಮಾಜಿಕ ಸೇವೆಯ ಭಾಗವಾಗಿ ಅಂದು ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಹಾಗೂ ಕಣ್ಣು ಮತ್ತು ಕಿವಿ ಪರೀಕ್ಷೆಗಳನ್ನು ನಡೆಸಲಾಗುವುದು. ಸಾರಿಗೆ ಉದ್ಯಮದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಉದ್ದೇಶದಿಂದ, 8 ರಿಂದ 12ನೇ ತರಗತಿಯಲ್ಲಿ ಶೇ. 60 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆಯ ಮಾಹಿತಿ ಮತ್ತು ಅರ್ಜಿಗಳನ್ನು ವಿತರಿಸಲಾಗುವುದು ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿʼಸೋಜಾ ಹಾಗೂ ಶ್ರೀರಾಮ್ ಫೈನಾನ್ಸ್‌ನ ಉನ್ನತ ಅಧಿಕಾರಿಗಳಾದ ಉಮೇಶ್ ಜಿ. ರೇವಣಂಕರ್, ದೀಪಕ್ ಶೆಟ್ಟಿ, ಜೆಎಂಡಿ ಸುದರ್ಶನ ಹೋಳ್ಳ ಬಾಳ್ಕಾಡ್, ನಿಲೇಶ್ ಒಡೆಯರ್, ಡೈರೆಕ್ಟರ್‌ ನೀಲೇಶ್‌ ಒಡೆಯರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಾರಿಗೆ ಕ್ಷೇತ್ರದ ಚಾಲಕರು ಮತ್ತು ಮಾಲೀಕರು ತಮ್ಮ ಕುಟುಂಬದೊಂದಿಗೆ ಈ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಮನವಿ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧಿಕಾರಿಗಳಾದ ನಾಗರಾಜ್, ಚೇತನ್ ಅರಸ್, ಚಂದ್ರಹಾಸ ಆಳ್ವ, ಸಚಿನ್ ಮತ್ತು ಜಿತೇಶ್ ಉಪಸ್ಥಿತರಿದ್ದರು.

error: Content is protected !!