ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ಇತ್ತೀಚೆಗೆ ಉದ್ಯಮಿ ಮತ್ತು ಪಾಡ್‌ಕಾಸ್ಟ್ ನಿರೂಪಕ ರಾಜ್ ಶಮಾನಿ ಅವರೊಂದಿಗೆ ಮಾತನಾಡುತ್ತಾ, ತಮ್ಮ ಜೀವನದ ಅತ್ಯಂತ ಕರಾಳ ಮತ್ತು ಮುಜುಗರದ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. ಕೃತಕ ಬುದ್ಧಿಮತ್ತೆ (AI) ಸೃಷ್ಟಿಸುತ್ತಿರುವ ನಕಲಿ ಚಿತ್ರಗಳು (Deepfakes) ಮತ್ತು ಮಾರ್ಫ್ ಮಾಡಿದ ಫೋಟೋಗಳು ಇಂದಿನ ದಿನಗಳಲ್ಲಿ ಹೇಗೆ ಒಬ್ಬ ನಟಿಯ ವೃತ್ತಿಜೀವನ ಮತ್ತು ವೈಯಕ್ತಿಕ ಶಾಂತಿಯನ್ನು ಕದಡುತ್ತಿವೆ ಎಂಬುದನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಜಾನ್ವಿ ಕಪೂರ್ ಅವರಿಗೆ ಈ ಮಾರ್ಫಿಂಗ್ ಜಾಲದ ಮೊದಲ ಪರಿಚಯವಾದದ್ದು ಅವರು ಕೇವಲ 15 ವರ್ಷದವರಿದ್ದಾಗ. ಶಾಲೆಯಲ್ಲಿ ಐಟಿ (IT) ಕ್ಲಾಸ್ ನಡೆಯುತ್ತಿದ್ದಾಗ, ಸಹಪಾಠಿಗಳು ತಮಾಷೆಗಾಗಿ ಅಶ್ಲೀಲ ವೆಬ್‌ಸೈಟ್‌ಗಳನ್ನು ಜಾಲಾಡುತ್ತಿದ್ದರು. ಆ ಸಮಯದಲ್ಲಿ ಹಠಾತ್ತನೆ ಜಾನ್ವಿ ಅವರದ್ದೇ ಮಾರ್ಫ್ ಮಾಡಿದ ಫೋಟೋವೊಂದು ಆ ಸೈಟ್‌ನಲ್ಲಿ ಕಾಣಿಸಿಕೊಂಡಿತ್ತು.
/elle-india/media/post_attachments/1cd786db-25e.jpg)
“ಅದು ಡೀಪ್‌ಫೇಕ್ ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ಅಶ್ಲೀಲ ಸೈಟ್‌ನಲ್ಲಿ ನನ್ನ ಫೋಟೋ ನೋಡಿ ನನಗೆ ತೀವ್ರ ಆಘಾತವಾಯಿತು. ಶಾಲಾ ದಿನಗಳಲ್ಲಿ ಅಂತಹದ್ದೊಂದು ಅನುಭವ ನಿಜಕ್ಕೂ ವಿಚಿತ್ರ ಮತ್ತು ಭಯಾನಕವಾಗಿತ್ತು,” ಎಂದು ಜಾನ್ವಿ ಆ ದಿನದ ನೋವನ್ನು ಸ್ಮರಿಸಿದ್ದಾರೆ.

“ಇದು ನಾವು ತೆರಬೇಕಾದ ಬೆಲೆ ಅಂದುಕೊಂಡಿದ್ದೆ…”
ಆರಂಭದಲ್ಲಿ, ಸಾರ್ವಜನಿಕವಾಗಿ ಗುರುತಿಸಿಕೊಳ್ಳುವ ವ್ಯಕ್ತಿಗಳು ಇಂತಹ ಸಮಸ್ಯೆಗಳನ್ನು ಎದುರಿಸಲೇಬೇಕು, ಇದು ನಾವು ತೆರಬೇಕಾದ ಬೆಲೆ (Cost to pay) ಎಂದು ಜಾನ್ವಿ ಅಂದುಕೊಂಡಿದ್ದರಂತೆ. ಸೋಶಿಯಲ್ ಮೀಡಿಯಾದಲ್ಲಿ ನೈತಿಕತೆ ಎಂಬುದು ಇರುವುದಿಲ್ಲ ಎಂದು ಅವರು ಸಮಾಧಾನ ಮಾಡಿಕೊಳ್ಳಲು ಯತ್ನಿಸಿದರೂ, ದಿನಕಳೆದಂತೆ ಇದು ಅನ್ಯಾಯ ಮತ್ತು ಅಸುರಕ್ಷಿತ ಎಂಬ ಅರಿವು ಅವರಿಗೆ ಮೂಡತೊಡಗಿತು.

ಇಂದಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ, ನಕಲಿ ಚಿತ್ರಗಳನ್ನು ಅಸಲಿ ಎಂದು ನಂಬುವಷ್ಟು ಭೀಕರವಾಗಿ ಸೃಷ್ಟಿಸಲಾಗುತ್ತಿದೆ. “ಈಗ ನನಗಿದರಿಂದ ನೆಮ್ಮದಿ ಇಲ್ಲದಂತಾಗಿದೆ. ಅಧಿಕೃತ ಸುದ್ದಿ ಸಂಸ್ಥೆಗಳೂ ಸಹ ನನ್ನ ಎಐ-ಜನರೇಟೆಡ್ (AI-generated) ಚಿತ್ರಗಳನ್ನು ಅಸಲಿ ಎಂದು ಹಂಚಿಕೊಳ್ಳುತ್ತಿವೆ. ನಾನು ಎಂದೂ ಧರಿಸದ ಬಟ್ಟೆಗಳು ಅಥವಾ ನಾನು ಇರದೇ ಇರುವ ಸ್ಥಳಗಳಲ್ಲಿ ನನ್ನನ್ನು ತೋರಿಸಲಾಗುತ್ತಿದೆ. ಇದು ನಿಜಕ್ಕೂ ಆತಂಕಕಾರಿ,” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಜಾನ್ವಿ ಕಪೂರ್ ಅವರ ಈ ಮುಕ್ತ ಮಾತುಗಳು ಕೇವಲ ಸಿನಿಮಾ ರಂಗಕ್ಕೆ ಮಾತ್ರವಲ್ಲದೆ, ಇಂಟರ್ನೆಟ್ ಬಳಸುವ ಪ್ರತಿಯೊಬ್ಬರಿಗೂ ಎಚ್ಚರಿಕೆಯ ಗಂಟೆಯಾಗಿದೆ. ಎಐ ತಂತ್ರಜ್ಞಾನವು ಸೃಜನಶೀಲತೆಗೆ ಬಳಕೆಯಾಗುವ ಬದಲು, ಒಬ್ಬರ ಗೌರವ ಹಾಳುಮಾಡಲು ಬಳಕೆಯಾಗುತ್ತಿರುವುದು ದುರದೃಷ್ಟಕರ.
