ನವದೆಹಲಿ: ದೆಹಲಿ ವಿವಿಯ ಎರಡು ಪ್ರಮುಖ ಕಾಲೇಜುಗಳಿಗೆ ಇಂದು(ಏ.6) ಬೆಳಿಗ್ಗೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದು, ಕಾಲೇಜುಗಳನ್ನು ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಎರಡು ಪ್ರಮುಖ ಕಾಲೇಜುಗಳಾದ ರಾಮ್‌ಜಾಸ್ ಕಾಲೇಜು ಮತ್ತು ಮಿರಾಂಡಾ ಕಾಲೇಜಿಗೆ ಇಂದು ಬೆಳಿಗ್ಗೆ ಇಮೇಲ್ ಮೂಲಕ ಬಾಂಬ್ ಸ್ಫೋಟಿಸುವ ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆ ಎರಡೂ ಕ್ಯಾಂಪಸ್‌ಗಳನ್ನು ಖಾಲಿ ಮಾಡಿಸಲಾಗಿದೆ.
ಬೆದರಿಕೆ ಇಮೇಲ್ ಬಂದ ಕೂಡಲೇ ಕಾಲೇಜುಗಳಲ್ಲಿ ಗೊಂದಲಮಯ ವಾತಾವರಣ ಉಂಟಾಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕೂಡಲೇ ದೆಹಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಬಾಂಬ್ ನಿಷ್ಕ್ರೀಯ ತಂಡ ಮತ್ತು ಡಾಗ್ ಸ್ಕ್ವಾಡ್ಗಳನ್ನು ನಿಯೋಜಿಸಿದ್ದಾರೆ. ಸದ್ಯ ಕಾಲೇಜು ಆವರಣದಲ್ಲಿ ಸಂಪೂರ್ಣವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈವರೆಗೆ ಯಾವುದೇ ಸ್ಫೋಟಕ ವಸ್ತು ಅಥವಾ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದು ಸುಳ್ಳು ಬಾಂಬ್ ಬೆದರಿಕೆಯಾಗಿರಬಹುದು ಎನ್ನಲಾಗಿದೆ.

ಸದ್ಯ ಬೆದರಿಕೆ ಇಮೇಲ್ ಕಳುಹಿಸಿದವರನ್ನು ಪತ್ತೆಹಚ್ಚಲು ಪೊಲೀಸರ ಸೈಬರ್ ಸೆಲ್ ತನಿಖೆ ಆರಂಭಿಸಿದೆ. ಇಮೇಲ್ ಮೂಲವನ್ನು ಗುರುತಿಸಲು ಮತ್ತು ಬೆದರಿಕೆಯ ಹಿಂದಿನ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.