ಏಪ್ರಿಲ್ 6ಕ್ಕೆ ಪಿಲಿಕುಳದಲ್ಲಿ ಮಕ್ಕಳಿಗಾಗಿ ಅದ್ಧೂರಿ ʻಫನ್ ಸೈಕಲ್ ರೈಡ್ʼ

ಮಂಗಳೂರು: ನಗರದ ಯೂರೋಕಿಡ್ಸ್ ಕೊಡಿಯಾಲ್ ಬೈಲ್ ಸಂಸ್ಥೆಯ ವತಿಯಿಂದ ಬೇಸಿಗೆ ರಜೆಯ ಮೋಜಿನ ಅಂಗವಾಗಿ ಏಪ್ರಿಲ್ 6ರ ಸೋಮವಾರದಂದು ಪಿಲಿಕುಳ ಹೆರಿಟೇಜ್ ಹೌಸ್ ಆವರಣದಲ್ಲಿ ಮಕ್ಕಳಿಗಾಗಿ ವಿಶೇಷ ʻಫನ್ ಸೈಕಲ್ ರೈಡ್’ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್ನರ್ ಆರತಿ ಶೆಟ್ಟಿ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಸೈಕಲ್ ಕೋ ಮತ್ತು ಪ್ರಸಿದ್ಧ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ‘ಸೈಕ್ಲಿಂಗ್ ಭಟ್ರು’ ಅವರ ಸಹಯೋಗದೊಂದಿಗೆ ಈ ವಿಶಿಷ್ಟ ಕಾರ್ಯಕ್ರಮ ಜರುಗಲಿದೆ ಎಂದು ವಿವರ ನೀಡಿದರು.

ಅಂದು ಬೆಳಿಗ್ಗೆ 9ರಿಂದ ನಡೆಯಲಿರುವ ಈ ರೈಡ್ ಅನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್‌ ಎಚ್‌ವಿ ಅವರು ಉದ್ಘಾಟಿಸಲಿದ್ದಾರೆ. ಸದೃಢ ಭಾರತ ಮತ್ತು ಮಕ್ಕಳಲ್ಲಿ ಆರೋಗ್ಯಕರ ಜೀವನಶೈಲಿ ಬೆಳೆಸುವ ನಿಟ್ಟಿನಲ್ಲಿ ಈ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

“ಸೈಕಲ್ ರೈಡ್ ನಡೆಯುವ ಮಾರ್ಗವನ್ನು ಸಂಪೂರ್ಣವಾಗಿ ʻಟ್ರಾಫಿಕ್ ಫ್ರೀ’ ವಲಯವನ್ನಾಗಿ ಗುರುತಿಸಲಾಗಿದೆ. ಇದರಿಂದ ಮಕ್ಕಳು ಯಾವುದೇ ಭಯವಿಲ್ಲದೆ ಸೈಕಲ್ ಓಡಿಸಬಹುದು. 2 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳು ತಮ್ಮ ಪೋಷಕರೊಂದಿಗೆ ಈ ಸೈಕಲ್ ರೈಡ್‌ನಲ್ಲಿ ಭಾಗವಹಿಸಲು ಅವಕಾಶವಿದೆ. ನೋಂದಣಿ ಶುಲ್ಕ ಕೇವಲ ರೂ. 200 ಇದೆ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಅರುಣ್ ಕುಮಾರ್ ಶೆಟ್ಟಿ ಮತ್ತು ಅವರ ತಂಡವು ಈ ಕಾರ್ಯಕ್ರಮಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡಿದೆ,” ಎಂದು ಆರತಿ ಶೆಟ್ಟಿ ಮಾಹಿತಿ ನೀಡಿದರು.

ಭಾಗವಹಿಸುವ ಎಲ್ಲಾ ಪುಟಾಣಿಗಳಿಗೆ ಹಣ್ಣು-ಹಂಪಲು ವಿತರಿಸಲಾಗುವುದು. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಭಾಗವಹಿಸುವ ಮಗುವಿಗೆ ಪ್ರಮಾಣಪತ್ರ ಮತ್ತು ವಿಶೇಷ ಉಡುಗೊರೆಯನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಮಕ್ಕಳು ತಮ್ಮದೇ ಆದ ಸೈಕಲ್ ಮತ್ತು ಪೋಷಕರೊಂದಿಗೆ ಆಗಮಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಯೂರೋಕಿಡ್ಸ್‌ನ ಶ್ರೇಯಸ್ ನಾಯಕ್ ಉಪಸ್ಥಿತರಿದ್ದರು.

error: Content is protected !!