ಮಂಗಳೂರಿನಲ್ಲಿ ಏಪ್ರಿಲ್ 7ರಂದು ದೈವಜ್ಞ ಗುರುವಂದನಾ ಮಹೋತ್ಸವ

ಮಂಗಳೂರು: ಸೋದೆ ಶ್ರೀ ವಾದಿರಾಜ ಮಠದ ಪ್ರಮುಖ ಶಿಷ್ಯ ಸಮುದಾಯವಾದ ದೈವಜ್ಞ ಬ್ರಾಹ್ಮಣ ಶಿಷ್ಯ ವೃಂದ, ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಏಪ್ರಿಲ್ 7ರಂದು ನಗರದಲ್ಲಿ ‘ದೈವಜ್ಞ ಗುರುವಂದನಾ ಮಹೋತ್ಸವ’ ಹಮ್ಮಿಕೊಳ್ಳಲಾಗಿದೆ ಎಂದು ವೃಂದದ ಅಧ್ಯಕ್ಷ ರವೀಂದ್ರ ಶೇಟ್ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೈತ್ರ ಮಾಸದ ಕೃಷ್ಣ ಪಕ್ಷದ ಪಂಚಮಿಯಂದು ಸೋದೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರಿಗೆ ಭಕ್ತಿಪೂರ್ವಕ ‘ಗುರುವಂದನಾ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರ ನೀಡಿದರು.

ಅಂದು ಅಪರಾಹ್ನ 3:00 ಗಂಟೆಗೆ ಡೊಂಗರಕೇರಿ ಕೆನರಾ ಹೈಸ್ಕೂಲ್ ವೃತ್ತದಿಂದ ಶ್ರೀ ಶರವು ಮಹಾಗಣಪತಿ ದೇವಸ್ಥಾನದವರೆಗೆ ಭವ್ಯ ಶೋಭಾಯಾತ್ರೆ ಜರುಗಲಿದೆ. ಈ ಮೆರವಣಿಗೆಯು ಡೊಂಗರಕೇರಿ ಕೆನರಾ ಹೈಸ್ಕೂಲ್‌ನಿಂದ ಹೊರಟು ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನ, ನೃತ್ಯಗಿರಿ ಬಾಲಿಕಾ, ಕಾರ್‌ಸ್ಟ್ರೀಟ್ ರಸ್ತೆ ಮತ್ತು ಶ್ರೀ ಮಹಾಮಾಯಾ ದೇವಸ್ಥಾನದ ಮಾರ್ಗವಾಗಿ ಶರವು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ತಲುಪಲಿದೆ ಎಂದು ಅವರು ತಿಳಿಸಿದರು.

ಶೋಭಾಯಾತ್ರೆಯ ನಂತರ ಸಂಜೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರಿಂದ ಆಶೀರ್ವಚನ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀಪಾದರಿಗೆ ಸಮಾಜದ ಬಾಂಧವರಿಂದ ಭಕ್ತಿ ಗೌರವದ ಗುರುವಂದನೆ ಸಲ್ಲಿಕೆಯಾಗಲಿದೆ. ಕಾರ್ಯಕ್ರಮದಲ್ಲಿ ಸಮಾಜದ ಅನೇಕ ಗಣ್ಯರು, ಶಿಷ್ಯ ಭಕ್ತರು ಮತ್ತು ನಾಗರಿಕರು ಪಾಲ್ಗೊಳ್ಳಲಿದ್ದಾರೆ. ರಾತ್ರಿ 8:30ಕ್ಕೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರುಗಲಿದೆ ಎಂದು ರವೀಂದ್ರ ಶೇಟ್ ಮಾಹಿತಿ ನೀಡಿದರು.

ದೈವಜ್ಞ ಬ್ರಾಹ್ಮಣ ಸಮುದಾಯವು ಶ್ರೀ ವಾದಿರಾಜ ಗುರುಸಾರ್ವಭೌಮರ ಅನುಗ್ರಹದಿಂದ ಬೆಳೆದು ಬಂದ ವೈದಿಕ ಪರಂಪರೆಯುಳ್ಳ ಸಮುದಾಯವಾಗಿದೆ. 1510ರಲ್ಲಿ ಪೋರ್ಚುಗೀಸರ ದಬ್ಬಾಳಿಕೆಯಿಂದಾಗಿ ಗೋವಾ ಪ್ರದೇಶದಿಂದ ಕರ್ನಾಟಕ ಮತ್ತು ಕೇರಳದ ಕರಾವಳಿ ಭಾಗಗಳಿಗೆ ಈ ಸಮುದಾಯ ವಲಸೆ ಬಂದ ಇತಿಹಾಸವನ್ನು ಅಧ್ಯಕ್ಷರು ಈ ಸಂದರ್ಭದಲ್ಲಿ ಸ್ಮರಿಸಿದರು. ಶ್ರೀ ವಾದಿರಾಜ ಗುರುಗಳು ದೈವಜ್ಞ ಬ್ರಾಹ್ಮಣರನ್ನು ಮಠದ ಮುಖ್ಯ ಶಿಷ್ಯರನ್ನಾಗಿ ಸ್ವೀಕರಿಸಿ ಹರಸಿದ್ದರು ಎಂಬ ಅಂಶವನ್ನು ಅವರು ಉಲ್ಲೇಖಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎಸ್. ವಿನೋದ್ ಕುಮಾರ್ ಶೇಟ್, ಜೊತೆ ಕಾರ್ಯದರ್ಶಿ ಅನಿಲ್ ಸದಾನಂದ ಶೇಟ್, ಕಾರ್ಯನಿರ್ವಾಹಕ ಎಂ. ಪ್ರಶಾಂತ್ ಶೇಟ್, ಸುಧಾಕರ ರಾವ್‌ ಪೇಜಾವರ ಹಾಗೂ ಧೀರಜ್ ಮತ್ತು ಕೆ. ಜಿ. ಶೇಟ್ ಉಪಸ್ಥಿತರಿದ್ದರು.

error: Content is protected !!