ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಭಾನುಕ ರಾಜಪಕ್ಸೆ ಈಗ ಮೈದಾನದ ಹೊರಗೆ ದೊಡ್ಡ ‘ಗೇಮ್’ ಆಡುತ್ತಿದ್ದಾರೆ. ಪ್ರೀತಿ, ಬ್ರೇಕ್-ಅಪ್ ಮತ್ತು ಒಂದು ಬೆಲೆಬಾಳುವ ಚಿನ್ನದ ಸರದ ಸುತ್ತ ಸುತ್ತುತ್ತಿರುವ ಈ ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರಿದೆ. ರಾಜಪಕ್ಸೆ ನೀಡಿದ ದೂರಿನ ಮೇರೆಗೆ ನಟಿ ಹರ್ಷಿ ರಸಂಗ ಜೈಲು ಪಾಲಾಗಿ ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ!

ಭಾನುಕ ರಾಜಪಕ್ಸೆ ಮತ್ತು ನಟಿ ಹರ್ಷಿ ರಸಂಗ ಈ ಹಿಂದೆ ಗಾಢವಾದ ಪ್ರೇಮ ಸಂಬಂಧ ಹೊಂದಿದ್ದರು. ಆ ಸಮಯದಲ್ಲಿ ರಾಜಪಕ್ಸೆ ಪ್ರೀತಿಯಿಂದ ಒಂದು ಚಿನ್ನದ ಸರ ಮತ್ತು ಪೆಂಡೆಂಟ್ ಅನ್ನು ಹರ್ಷಿಗೆ ನೀಡಿದ್ದರು. ಆದರೆ, ಯಾವಾಗ ಈ ಜೋಡಿ ಹಕ್ಕಿಗಳ ನಡುವೆ ವಿರಸ ಮೂಡಿ ಬ್ರೇಕ್-ಅಪ್ ಆಯ್ತೋ, ಆಗ ರಾಜಪಕ್ಸೆ ತಮ್ಮ ಆಭರಣವನ್ನು ಮರಳಿ ಕೇಳಿದ್ದಾರೆ. ಅಲ್ಲಿಂದಲೇ ಅಸಲಿ ಆಟ ಶುರುವಾಗಿದ್ದು!

ರಾಜಪಕ್ಸೆ ಅವರು ತಮ್ಮ ಸರವನ್ನು ಮರಳಿ ಕೇಳಿದಾಗ ಹರ್ಷಿ ಅದನ್ನು ನೀಡಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಭಾನುಕ ಅವರ ಅನುಮತಿಯಿಲ್ಲದೆಯೇ ಆ ಬೆಲೆಬಾಳುವ ಆಭರಣವನ್ನು ನಟಿ ಅಡವಿಟ್ಟಿರುವುದು ಬೆಳಕಿಗೆ ಬಂದಿದೆ. “ಅದು ನನಗೆ ಕೊಟ್ಟ ಗಿಫ್ಟ್” ಎಂದು ನಟಿ ವಾದಿಸುತ್ತಿದ್ದರೆ, ರಾಜಪಕ್ಸೆ ಮಾತ್ರ ಇದು ‘ನಂಬಿಕೆ ದ್ರೋಹ’ ಎಂದು ಪೊಲೀಸರ ಮೊರೆ ಹೋಗಿದ್ದಾರೆ.

ದೂರು ದಾಖಲಾದ ಬೆನ್ನಲ್ಲೇ ತಲಂಗಮ ಪೊಲೀಸರು ನಟಿ ಹರ್ಷಿ ರಸಂಗ ಅವರನ್ನು ಬಂಧಿಸಿದ್ದರು. ಮಾರ್ಚ್ 29, 2026 ರಂದು ಕಡುವೇಲ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ. ಆದರೆ, ಜೈಲಿನಿಂದ ಹೊರಬಂದ ಮೇಲೆ ನಟಿ ಸುಮ್ಮನಿರದೆ ಸೋಶಿಯಲ್ ಮೀಡಿಯಾದಲ್ಲಿ ರಾಜಪಕ್ಸೆ ವಿರುದ್ಧ ವಿಡಿಯೋಗಳನ್ನು ಮಾಡಿ ಕೆಣಕಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರುವ ರಾಜಪಕ್ಸೆ, ಏಪ್ರಿಲ್ 1ರಂದು ನಟಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.

ಒಂದೆಡೆ ವೈಯಕ್ತಿಕ ಜೀವನದ ಈ ರಂಪಾಟ, ಇನ್ನೊಂದೆಡೆ ವೃತ್ತಿಜೀವನದಲ್ಲೂ ಭಾನುಕ ಅವರಿಗೆ ಹಿನ್ನಡೆಯಾಗಿದೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆ ಹೊಂದಿದ್ದರೂ ಯಾವುದೇ ಫ್ರಾಂಚೈಸಿ ಇವರನ್ನು ಖರೀದಿಸಿಲ್ಲ. ಐಪಿಎಲ್ ಮೈದಾನದಿಂದ ದೂರವಿರುವ ರಾಜಪಕ್ಸೆ ಈಗ ಕೋರ್ಟ್ ಅಂಗಳದಲ್ಲಿ ತಮ್ಮ ‘ನ್ಯಾಯ’ಕ್ಕಾಗಿ ಹೋರಾಡುತ್ತಿದ್ದಾರೆ.