ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು; ಮಗುವಿನ ಸಾವಿಗೆ ನಾನೇ ಕಾರಣ ಎಂದು ತಾಯಿ ಆತ್ಮಹ*ತ್ಯೆ

ಬೆಂಗಳೂರು: ಬಕೆಟ್ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದ್ದು, ಮಗುವಿನ ಸಾವಿಗೆ ನಾನೇ ಕಾರಣ ಎಂಬ ಪಾಪ ಪ್ರಜ್ಞೆಯಿಂದ ಮನನೊಂದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ.

ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ (29) ಮತ್ತು ಅವರ 11 ತಿಂಗಳ ಗಂಡು ಮಗು ಅಗಸ್ತ್ಯ ಮೃತ ದುರ್ದೈವಿಗಳು.

ಪ್ರತಿಭಾ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಬುಧವಾರ ಸಂಜೆ ಟೆರೇಸ್ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಪ್ರತಿಭಾ ಅವರು ಮೇಲಕ್ಕೆ ಹೋಗಿದ್ದಾಗ  ಮಗು ಆಟವಾಡುತ್ತಾ ಬಚ್ಚಲು ಮನೆಗೆ ಹೋಗಿದೆ. ಅಲ್ಲಿ ನೀರಿನಿಂದ ತುಂಬಿದ್ದ ಬಕೆಟ್‌ನಲ್ಲಿ ಮುಳುಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಬಟ್ಟೆ ತಂದು ಕೆಳಗೆ ಬಂದ ಪ್ರತಿಭಾಗೆ ಮಗುವಿನ ಸ್ಥಿತಿ ಕಂಡು ದಿಕ್ಕು ತೋಚದಂತಾಗಿದೆ. ಪ್ರತಿಭಾ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿ ಮಗುವಿನ ಸಾವಿಗೆ ನಾನೇ ಕಾರಣ ಎಂಬ ಪಾಪ ಪ್ರಜ್ಞೆಯಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪತಿ ಮಹಾಂತೇಶ್ ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ತಮ್ಮ ಬಳಿಯಿದ್ದ ಕೀಲಿಯಿಂದ ಬಾಗಿಲು ತೆರೆದು ಒಳಹೋದಾಗ ಪ್ರತಿಭಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗು ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿತ್ತು. ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್​​ನಿಂದ ಪತಿಗೆ ಸಾವಿನ ವಿಚಾರ ತಿಳಿದಿದೆ. ‘ನನ್ನ ಮಗುವಿನ ಸಾವಿಗೆ ನಾನೇ ಕಾರಣ, ಅವನನ್ನು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪ್ರತಿಭಾ ಡೆತ್​ನೋಟ್​​ನಲ್ಲಿ ಬರೆದಿಟ್ಟಿದ್ದರು. ನೇಣಿಗೆ ಶರಣಾಗುವ ಮುನ್ನ ಪ್ರತಿಭಾ ಅವರು 15 ಮಾತ್ರೆಗಳನ್ನು ನುಂಗಿ, ಕೈ ಕುಯ್ದುಕೊಂಡು ಸಾಯುವುದಕ್ಕೆ ಯತ್ನಿಸಿದ್ದರು. ಆದರೆ ರಕ್ತ ಬಾರದ ಕಾರಣ ಕೊನೆಗೆ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

ಚಂದ್ರಾಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

error: Content is protected !!