ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳ ತನಿಖೆಗೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ (AI) ಬಳಸಿ ವಿವಾದಾತ್ಮಕ ವಿಡಿಯೋ ತಯಾರಿಸಿ ಹರಿಯಬಿಟ್ಟಿದ್ದ ಯೂಟ್ಯೂಬರ್ ಎಂ.ಡಿ. ಸಮೀರ್ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ಧರ್ಮಸ್ಥಳದ ಪ್ರಕರಣಗಳ ಕುರಿತು ಕಾಲ್ಪನಿಕ ವಿಚಾರಗಳನ್ನು ಆಧರಿಸಿ, ಸಾವಿರಾರು ಜನರ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿದೆ ಎಂದು ಸಮೀರ್ ವಿಡಿಯೋ ಮಾಡಿದ್ದ. ಈ ವಿಡಿಯೋ ಸಾರ್ವಜನಿಕ ಶಾಂತಿಗೆ ಭಂಗ ತರುತ್ತದೆ ಮತ್ತು ದ್ವೇಷ ಬಿತ್ತುತ್ತದೆ ಎಂಬ ಕಾರಣಕ್ಕೆ ಧರ್ಮಸ್ಥಳ ಪೊಲೀಸರು 2025ರ ಜುಲೈನಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದರು.

ತನ್ನ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಮೀರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, ಸದ್ಯಕ್ಕೆ ತನಿಖೆಗೆ ತಡೆ ನೀಡಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆ ವೇಳೆ ಅರ್ಜಿದಾರನ ಪರ ವಕೀಲರು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ ಎಂದಾಗ, “ಅರ್ಜಿದಾರ ಯಾರ ನೆಮ್ಮದಿ ಹಾಳು ಮಾಡಿದ್ದಾರೆ ಎಂದು ನಮಗೆ ತಿಳಿದಿದೆ. ಅವರಿಗೆ ಸುಮ್ಮನಿರಲು ಆಗುವುದಿಲ್ಲವೇ?” ಎಂದು ನ್ಯಾಯಪೀಠವು ಮಾರ್ಮಿಕವಾಗಿ ಪ್ರಶ್ನಿಸಿತು.

ಸರ್ಕಾರಿ ಅಭಿಯೋಜಕರು, ಅರ್ಜಿದಾರನು ಎಐ ತಂತ್ರಜ್ಞಾನ ಬಳಸಿ ಸುಳ್ಳು ಮಾಹಿತಿ ನೀಡಿದ್ದಾನೆ, ಜನರನ್ನು ಪ್ರಚೋದಿಸಿದ್ದಾನೆ ಮತ್ತು ದ್ವೇಷದ ವಾತಾವರಣ ಸೃಷ್ಟಿಸಿದ್ದಾನೆ ಎಂದು ವಾದಿಸಿದರು.
