ಕಾಲುವೆಗೆ ಉರುಳಿದ ಟ್ರ್ಯಾಕ್ಟರ್ ಟ್ರಾಲಿ; ಮೂವರು ಮಹಿಳೆಯರ ಸಾ*ವು, 18 ಮಂದಿಗೆ ಗಾಯ

ಕುಶಿನಗರ: ಚೈತ್ರ ರಾಮನವಮಿ ಮೇಳಕ್ಕೆ ತೆರಳುತ್ತಿದ್ದ ಭಕ್ತರಿದ್ದ ಟ್ರ್ಯಾಕ್ಟರ್ ಟ್ರಾಲಿ ನಿಯಂತ್ರಣ ತಪ್ಪಿ ಗಂಡಕ್ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಮೂವರು ಮಹಿಳೆಯರು ಮೃತಟ್ಟಿದ್ದು, ಸುಮಾರು 18 ಮಂದಿ ಗಾಯಗೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಜ್‌ಗಂಜ್ ಜಿಲ್ಲೆಯ ಘುಘ್ಲಿ ಪ್ರದೇಶದ ಮಂಖೋರ್ ಬರ್ಹರಾ ಗ್ರಾಮದ ಸುಮಾರು 25 ಭಕ್ತರು ಬುಧವಾರ(ಎ.2) ರಾತ್ರಿ “ಚೈತ್ರ ರಾಮನವಮಿ ವರ್ಣಿ” ಮೇಳದಲ್ಲಿ ಪಾಲ್ಗೊಳ್ಳಲು ಭೈಸಾಹ ಘಾಟ್‌ಗೆ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ತೆರಳುತ್ತಿದ್ದರು. ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಖಡ್ಡಾ ಪೊಲೀಸ್ ಠಾಣಾ ವ್ಯಾಪ್ತಿಯ ಸಿಸ್ವಾ ರೆಗ್ಯುಲೇಟರ್ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 21 ಜನರನ್ನು ತಕ್ಷಣವೇ ಕುಶಿನಗರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೀರಾ ದೇವಿ (57), ಕಿಸ್ಮತಿ ದೇವಿ (51) ಮತ್ತು ನಿರ್ಮಲಾ (45) ಎಂಬುವವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಚಲಿಸುತ್ತಿದ್ದ ಟ್ರ್ಯಾಕ್ಟರ್ ಮತ್ತು ಟ್ರಾಲಿಯನ್ನು ಸಂಪರ್ಕಿಸುವ “ಹುಕ್” ಏಕಾಏಕಿ ಮುರಿದಿದ್ದೇ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಇದರಿಂದಾಗಿ ಟ್ರಾಲಿ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಗಂಡಕ್ ಕಾಲುವೆಗೆ ಪಲ್ಟಿಯಾಗಿದೆ.

ಅಪಘಾತ ಸಂಭವಿಸಿದ ತಕ್ಷಣ ಕೆಲವು ಪ್ರಯಾಣಿಕರು ಟ್ರಾಲಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಖಡ್ಡಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಂದೀಪ್ ಸಿಂಗ್ ತಿಳಿಸಿದ್ದಾರೆ.

error: Content is protected !!