ಎ.8ರಿಂದ ಜಜೀರಾ ಏರ್‌ವೇಸ್‌ ವಿಶೇಷ ಸೇವೆ

ಮಂಗಳೂರು: ಜಜೀರಾ ಏರ್‌ವೇಸ್‌ ಎ.8ರಿಂದ ಕುವೈಟ್‌ ಮತ್ತು ಮಂಗಳೂರು ನಡುವೆ ದಮ್ಮಾಮ್‌ ಮೂಲಕ ವಾರಕ್ಕೆ ಎರಡು ಬಾರಿ ಚಾರ್ಟರ್‌ ವಿಮಾನಗಳ ಸೇವೆ ಆರಂಭಿಸಲಿದೆ. ಈ ವಿಮಾನಗಳು ಬುಧವಾರ ಮತ್ತು ರವಿವಾರ ಸಂಚರಿಸಲಿವೆ.

ಜೆ9 3417 ವಿಮಾನ ಕುವೈಟ್‌ನಿಂದ ಅಲ್ಲಿನ ಸ್ಥಳೀಯ ಸಮಯ ಬೆಳಗ್ಗೆ 8.40ಕ್ಕೆ ಹೊರಟು, ಮಂಗಳೂರನ್ನು ಭಾರತೀಯ ಕಾಲಮಾನ ಸಂಜೆ 4.10ಕ್ಕೆ ತಲುಪಲಿದೆ. ಜೆ9 3418 ವಿಮಾನ ಮಂಗಳೂರಿನಿಂದ ಭಾರತೀಯ ಕಾಲಮಾನ ಸಂಜೆ 4.55ಕ್ಕೆ ಹೊರಟು, ಕುವೈಟ್‌ ಅನ್ನು ಅಲ್ಲಿನ ಸ್ಥಳೀಯ ಸಮಯ ರಾತ್ರಿ 7.40ಕ್ಕೆ ತಲುಪಲಿದೆ.

ಜಜೀರಾ ಏರ್‌ವೇಸ್‌ ಈ ಹಿಂದೆ ಕೋವಿಡ್‌ ಸಮಯದಲ್ಲಿ ಮಂಗಳೂರಿಗೆ ವಿಶೇಷ ಚಾರ್ಟರ್‌ವಿಮಾನ ಕಾರ್ಯಾಚರಣೆಗಳನ್ನು ನಡೆಸಿತ್ತು. ಈ ವಿಮಾನಗಳು ಡಿಜಿಸಿಎ ವಿಶೇಷ ಅನುಮತಿಯ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಅಧಿಕಾರಿಗಳಿಂದ ಅನುಮೋದನೆ ದೊರೆತಲ್ಲಿ ವಿಮಾನಗಳ ಸಂಖ್ಯೆಯನ್ನು ಎರಡರಿಂದ ನಾಲ್ಕಕ್ಕೆ ಹೆಚ್ಚಿಸಲು ವಿಮಾನಯಾನ ಸಂಸ್ಥೆಯು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

error: Content is protected !!