ನಿವೃತ್ತಿ ಜೀವನದ ಭದ್ರತೆಗೆ ಇಪಿಎಫ್: ಗೊಂದಲ ಬೇಡ, ಈ 5 ಸತ್ಯಗಳು ನಿಮಗೆ ತಿಳಿದಿರಲಿ!

ನವದೆಹಲಿ: ಉದ್ಯೋಗಸ್ಥರ ಪಾಲಿಗೆ ನಿವೃತ್ತಿಯ ನಂತರದ ಆರ್ಥಿಕ ಭದ್ರಕೋಟೆಯಾಗಿರುವ ʻನೌಕರರ ಭವಿಷ್ಯ ನಿಧಿ’ (EPF) ಬಗ್ಗೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಈ ಗೊಂದಲಗಳಿಂದಾಗಿ ಅನೇಕರು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇಪಿಎಫ್ ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 5 ಪ್ರಮುಖ ಸತ್ಯಗಳು ಇಲ್ಲಿವೆ:

1. ನಿವೃತ್ತಿ ವಯಸ್ಸು 60 ಅಲ್ಲ, 58!
ಬಹಳಷ್ಟು ಜನರು ಇಪಿಎಫ್ ನಿವೃತ್ತಿ ವಯಸ್ಸು 60 ಎಂದು ಭಾವಿಸಿದ್ದಾರೆ. ಆದರೆ, ಇಪಿಎಫ್ ನಿಯಮಗಳ ಪ್ರಕಾರ ಅಧಿಕೃತ ನಿವೃತ್ತಿ ವಯಸ್ಸು 58 ವರ್ಷ. ನೀವು 58 ವರ್ಷದ ನಂತರವೂ ಕೆಲಸ ಮುಂದುವರಿಸಿದರೂ, ಇಪಿಎಫ್‌ಗೆ ಹೊಸ ಕೊಡುಗೆಗಳು (Contributions) ಅಲ್ಲಿಗೆ ನಿಲ್ಲುತ್ತವೆ.

2. ನಿವೃತ್ತಿಯ ನಂತರವೂ ಸಿಗುತ್ತೆ ಬಡ್ಡಿ:
ಕೆಲಸ ಬಿಟ್ಟ ತಕ್ಷಣ ಇಪಿಎಫ್ ಹಣಕ್ಕೆ ಬಡ್ಡಿ ಬರುವುದು ನಿಲ್ಲುತ್ತದೆ ಎನ್ನುವುದು ಸುಳ್ಳು. ನೀವು 58ನೇ ವಯಸ್ಸಿನಲ್ಲಿ ನಿವೃತ್ತರಾದರೆ, ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಮುಂದಿನ 3 ವರ್ಷಗಳವರೆಗೆ (61 ವರ್ಷದವರೆಗೆ) ಬಡ್ಡಿ ಜಮೆಯಾಗುತ್ತಲೇ ಇರುತ್ತದೆ. ಆದರೆ ಈ ಅವಧಿ ಸೀಮಿತವಾಗಿರುತ್ತದೆ ಎಂಬುದನ್ನು ನೆನಪಿಡಿ.

3. ಅವಧಿಗೂ ಮುನ್ನ ನಿವೃತ್ತಿಯಾದರೆ ಬಡ್ಡಿ ಎಷ್ಟು ವರ್ಷ?
ನೀವು 58 ವರ್ಷಕ್ಕಿಂತ ಮೊದಲೇ ಕೆಲಸಕ್ಕೆ ರಾಜೀನಾಮೆ ನೀಡಿದರೆ ಅಥವಾ ನಿವೃತ್ತರಾದರೆ ಬಡ್ಡಿ ಬರುವ ಅವಧಿ ಬದಲಾಗುತ್ತದೆ. ಉದಾಹರಣೆಗೆ, 45ನೇ ವಯಸ್ಸಿಗೆ ಕೆಲಸ ಬಿಟ್ಟರೆ 58 ವರ್ಷ ತುಂಬುವವರೆಗೂ ಬಡ್ಡಿ ಸಿಗುತ್ತದೆ. ಅಂದರೆ ಇಲ್ಲಿ ಬಡ್ಡಿ ಬರುವ ಅವಧಿ ದೀರ್ಘವಾಗಿರುತ್ತದೆ.

4. ಕೆಲಸ ಬದಲಿಸಿದರೆ ಖಾತೆ ಬಂದ್ ಆಗಲ್ಲ:
ಕೆಲಸದ ನಡುವೆ ಗ್ಯಾಪ್ ಬಿದ್ದರೆ ಅಥವಾ ಉದ್ಯೋಗ ಬದಲಿಸಿದರೆ ಇಪಿಎಫ್ ಖಾತೆ ತಂತಾನೇ ಮುಚ್ಚಲ್ಪಡುವುದಿಲ್ಲ. ಸತತ 3 ವರ್ಷಗಳ ಕಾಲ ಯಾವುದೇ ಹಣ ಜಮೆಯಾಗದಿದ್ದರೆ ಖಾತೆಯನ್ನು ‘ನಿಷ್ಕ್ರಿಯ’ (Inoperative) ಎಂದು ಪರಿಗಣಿಸಲಾಗುತ್ತದೆ ಅಷ್ಟೇ. ನೀವು ಹಳೆಯ ಕಂಪನಿಯ ಹಣವನ್ನು ಹೊಸ ಕಂಪನಿಯ ಇಪಿಎಫ್ ಖಾತೆಗೆ ವರ್ಗಾಯಿಸಬಹುದು ಅಥವಾ ಹಣವನ್ನು ಹಿಂಪಡೆಯಬಹುದು.

5. ನಿವೃತ್ತಿಯ ಮೊದಲೇ ಪೆನ್ಷನ್ ಸಾಧ್ಯವೇ?
ಇಪಿಎಫ್ ಪೆನ್ಷನ್ (EPS) ಪಡೆಯಲು ನೀವು ಸಂಪೂರ್ಣವಾಗಿ ಕೆಲಸದಿಂದ ನಿವೃತ್ತರಾಗಬೇಕಿಲ್ಲ. ನೀವು 58 ವರ್ಷ ತುಂಬಿದ ನಂತರವೂ ಕೆಲಸ ಮಾಡುತ್ತಿದ್ದರೂ, ಪೆನ್ಷನ್ ಪಡೆಯಲು ಅರ್ಹರಾಗಿರುತ್ತೀರಿ. ಇದು ಆಜೀವ ಪರ್ಯಂತ ಸಿಗುವ ಮಾಸಿಕ ಪಿಂಚಣಿಯಾಗಿದೆ. ಸದ್ಯಕ್ಕೆ ಕನಿಷ್ಠ ಮಾಸಿಕ ಪಿಂಚಣಿ ₹1,000 ಆಗಿದ್ದು, ಇದನ್ನು ₹7,500ಕ್ಕೆ ಏರಿಸುವ ಪ್ರಸ್ತಾವನೆ ಇನ್ನೂ ಸರ್ಕಾರದ ಮುಂದಿದೆ.

error: Content is protected !!