ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ವಿಧಾನ ಪರಿಷತ್ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿಯವರು ದಾವಣಗೆರೆಯ ಕೆಪಿಸಿಸಿ ಕ್ಯಾಂಪ್ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದರು.


ಈ ಸಂದರ್ಭದಲ್ಲಿ ಆಯಾ ಬೂತ್ ಮಟ್ಟದ ಉಸ್ತುವಾರಿಗಳಿಗೆ ಅಧಿಕೃತ ಮತದಾರರ ಪಟ್ಟಿಯನ್ನು ಹಸ್ತಾಂತರಿಸಿದ ಬಳಿಕ ಪ್ರತಿಯೊಂದು ಮತವೂ ನಿರ್ಣಾಯಕವಾಗಿರುವುದರಿಂದ, ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ವ್ಯವಸ್ಥಿತವಾಗಿ ಪ್ರಚಾರ ನಡೆಸುವಂತೆ ಅವರು ಸೂಚನೆ ನೀಡಿದರು.

ಉಪಚುನಾವಣೆಯಲ್ಲಿ ಜಯಗಳಿಸುವ ಉದ್ದೇಶದಿಂದ ಕೈಗೊಳ್ಳಬೇಕಾದ ಪ್ರಚಾರ ಕಾರ್ಯಗಳ ಕುರಿತು ಅವರು ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಮಾರ್ಗದರ್ಶನ ನೀಡಿದರು. ಮನೆ ಮನೆಗೆ ಭೇಟಿ ನೀಡಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು ಮತ್ತು ಮತದಾರರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಸಚಿವರು, ವಿವಿಧ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಅನೇಕ ಸ್ಥಳೀಯ ಮತ್ತು ರಾಜ್ಯ ಮಟ್ಟದ ಮುಖಂಡರು ಉಪಸ್ಥಿತರಿದ್ದರು.
