ತಂದೆಯ ಮೇಲಿನ ಹಗೆಯನ್ನು ಮಗುವಿನ ಮೇಲೆ ತೀರಿಸಿಕೊಂಡ ನರರಾಕ್ಷಸ! ಕಂದಮ್ಮನ ಕಾಲು ಹಿಡಿದು ಕಬ್ಬಿಣದ ರಾಡ್‌ಗೆ ಬಡಿದ ಪಾಪಿ!

ಮುಂಬೈ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವೊಂದು ಅದೆಷ್ಟು ವಿಕೋಪಕ್ಕೆ ಹೋಗಬಹುದು ಎಂಬುದಕ್ಕೆ ಮಹಾರಾಷ್ಟ್ರದ ವಸೈನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತಂದೆಯ ಮೇಲಿನ ಹಗೆತನವನ್ನು ತೀರಿಸಿಕೊಳ್ಳಲು ಕಾಮುಕನೊಬ್ಬ ನಾಲ್ಕು ವರ್ಷದ ಹಸುಗೂಸನ್ನು ನೆಲಕ್ಕೆ ಅಪ್ಪಳಿಸಿ, ಕಬ್ಬಿಣದ ರಾಡ್‌ಗೆ ತಲೆ ಜಜ್ಜಿದ ಅಮಾನುಷ ಘಟನೆ ವಸೈನ ಹೌಸಿಂಗ್ ಸೊಸೈಟಿಯೊಂದರಲ್ಲಿ ನಡೆದಿದೆ. ಈ ಇಡೀ ಭೀಕರ ದೃಶ್ಯವು ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಹಳದಿ ಬಣ್ಣದ ಟಿ-ಶರ್ಟ್ ಧರಿಸಿದ್ದ ವಿಘ್ನೇಶ್ ಎಂಬ ನಾಲ್ಕು ವರ್ಷದ ಬಾಲಕ ತನ್ನ ಸ್ನೇಹಿತರೊಂದಿಗೆ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾದಲ್ಲಿ ಕುಳಿತು ಆಟವಾಡುತ್ತಿದ್ದ. ಈ ವೇಳೆ ನೀಲಿ ಶರ್ಟ್ ಧರಿಸಿ ಸ್ಥಳಕ್ಕೆ ಬಂದ ಆರೋಪಿ ಸಂದೀಪ್ ಪವಾರ್, ಮಗುವಿನ ಕಾಲುಗಳನ್ನು ಹಿಡಿದು ಆಟೋದಿಂದ ಹೊರಕ್ಕೆ ಎಳೆದಿದ್ದಾನೆ. ಮಗು ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಆತನನ್ನು ಎತ್ತಿ ಒಮ್ಮೆ ಜೋರಾಗಿ ನೆಲಕ್ಕೆ ಅಪ್ಪಳಿಸಿದ್ದಾನೆ.

ಕಬ್ಬಿಣದ ರಾಡ್‌ಗೆ ತಲೆ ಜಜ್ಜಿದ ಕಿರಾತಕ
ಆರೋಪಿಯ ಕ್ರೌರ್ಯ ಅಷ್ಟಕ್ಕೇ ನಿಲ್ಲಲಿಲ್ಲ. ನೆಲಕ್ಕೆ ಬಿದ್ದ ಮಗುವನ್ನು ಮತ್ತೆ ಎತ್ತಿಕೊಂಡ ಆತ, ಅಪಾರ್ಟ್‌ಮೆಂಟ್ ಒಳಗಿನ ಗೇಟ್ ಬಳಿ ಓಡಿಹೋಗಿ ಅಲ್ಲಿನ ಕಬ್ಬಿಣದ ರಾಡ್‌ಗೆ ಮಗುವಿನ ತಲೆಯನ್ನು ಬಲವಾಗಿ ಚಚ್ಚಿದ್ದಾನೆ. ನಂತರ ಮಗುವನ್ನು ಮತ್ತೆ ನೆಲಕ್ಕೆ ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ. ಕೇವಲ ಕೆಲವು ನಿಮಿಷಗಳ ಹಿಂದೆ ಆಟವಾಡುತ್ತಿದ್ದ ಕಂದಮ್ಮ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ದೃಶ್ಯ ಎದೆ ನಡುಗಿಸುವಂತಿದೆ.

ಸಣ್ಣ ಜಗಳವೇ ಈ ಘೋರ ಕೃತ್ಯಕ್ಕೆ ಕಾರಣ
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಸಂದೀಪ್ ಪವಾರ್ ಮತ್ತು ಮಗುವಿನ ತಂದೆಯ ನಡುವೆ ಇತ್ತೀಚೆಗೆ ಅತ್ಯಂತ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ಜಗಳದ ಸೇಡನ್ನು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಆರೋಪಿ, ತಂದೆಯ ಅನುಪಸ್ಥಿತಿಯಲ್ಲಿ ಮಗುವನ್ನೇ ಗುರಿಯಾಗಿಸಿಕೊಂಡಿದ್ದಾನೆ. ಹಿರಿಯರ ಜಗಳಕ್ಕೆ ಹಸುಗೂಸನ್ನು ಬಲಿಪಶು ಮಾಡಿದ ಆರೋಪಿಯ ಕೃತ್ಯಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಸಿಯುನಲ್ಲಿ ಮೃತ್ಯುವಿನೊಡನೆ ಹೋರಾಟ
ಘಟನೆಯ ತಕ್ಷಣವೇ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ವಿಘ್ನೇಶ್‌ನನ್ನು ಮೀರಾ ರೋಡ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಲಕ ತೀವ್ರ ನಿಗಾ ಘಟಕದಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಮಗುವಿನ ಸ್ಥಿತಿ ಅತೀ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಂದಮ್ಮನ ಪ್ರಾಣ ಉಳಿಯಲಿ ಎಂದು ಪೋಷಕರು ಮತ್ತು ಸ್ಥಳೀಯರು ಪ್ರಾರ್ಥಿಸುತ್ತಿದ್ದಾರೆ.

ಆರೋಪಿ ಪೊಲೀಸ್ ವಶಕ್ಕೆ
ಘಟನೆ ನಡೆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿ ಸಂದೀಪ್ ಪವಾರ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಸೈ ಪ್ರದೇಶದಲ್ಲಿ ಈ ಘಟನೆಯ ನಂತರ ಪೋಷಕರಲ್ಲಿ ಭೀತಿ ಆವರಿಸಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

error: Content is protected !!