ಬೆಂಗಳೂರು: ಸಿಲಿಕಾನ್ ಸಿಟಿಯ ಐಷಾರಾಮಿ ಬದುಕಿನ ನಡುವೆ ಹತಾಶೆಯ ಕತ್ತಲು ಅದೆಷ್ಟು ಆಳವಾಗಿ ಆವರಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತೆಲಂಗಾಣ ಮೂಲದ ಸಾಫ್ಟ್‌ವೇರ್ ದಂಪತಿ ಭಾನು ಚಂದರ್ ರೆಡ್ಡಿ ಮತ್ತು ಬಿಬಿ ಶಜಿಯಾ ಸಿರಾಜ್ ಅವರ ಜೀವನದ ಪಯಣ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಅತ್ಯಂತ ಭೀಕರವಾಗಿ ಅಂತ್ಯಗೊಂಡಿದೆ. ಲಕ್ಷ ಲಕ್ಷ ಸಂಬಳ, ಕೈತುಂಬಾ ಕೆಲಸವಿದ್ದರೂ ಈ ಜೋಡಿ ಸಾವಿನ ಹಾದಿ ಹಿಡಿದದ್ದು ಐಟಿ ಲೋಕವನ್ನು ಬೆಚ್ಚಿಬೀಳಿಸಿದೆ.

ಬಾಗಿಲು ತೆರೆದಾಗ ಕಾದಿತ್ತು ಘೋರ ಆಘಾತ!
ಸೋಮವಾರ ಬೆಳಿಗ್ಗೆ 32 ವರ್ಷದ ಭಾನು ಚಂದರ್ ರೆಡ್ಡಿ ತನ್ನ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಎಷ್ಟೇ ಹೊತ್ತಾದರೂ ಹೊರಬರದ ಪತಿಯನ್ನು ಕಂಡು ಆತಂಕಗೊಂಡ ಪತ್ನಿ ಶಜಿಯಾ, ಮನೆಯ ಬಾಗಿಲನ್ನು ಬಡಿದು ಕೂಗಾಡಿದ್ದಾರೆ. ಮೌನವೇ ಉತ್ತರವಾದಾಗ ಗಾಬರಿಗೊಂಡ ಆಕೆ ನೆರೆಹೊರೆಯವರು ಮತ್ತು ಭದ್ರತಾ ಸಿಬ್ಬಂದಿಯ ಸಹಾಯ ಕೋರಿದ್ದಾರೆ. ಎಲ್ಲರೂ ಸೇರಿ ಬಾಗಿಲನ್ನು ಬಲವಂತವಾಗಿ ಒಡೆದಾಗ ಕಂಡ ದೃಶ್ಯ ಎದೆ ನಡುಗಿಸುವಂತಿತ್ತು; ಭಾನು ಚಂದರ್ ರೆಡ್ಡಿ ಫ್ಯಾನಿಗೆ ನೇಣು ಬಿಗಿದುಕೊಂಡು ಹೆಣವಾಗಿದ್ದರು.

ಗಂಡನ ಹೆಣ ಕಂಡ ಮರುಕ್ಷಣವೇ 17ನೇ ಮಹಡಿಯಿಂದ ಜಿಗಿತ!
ಕಣ್ಣಮುಂದೆಯೇ ಪತಿಯ ನಿರ್ಜೀವ ದೇಹವನ್ನು ಕಂಡ 31 ವರ್ಷದ ಶಜಿಯಾಗೆ ಜಗತ್ತೇ ಕತ್ತಲಾದಂತಾಗಿತ್ತು. ಐಬಿಎಂ (IBM) ನಂತಹ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಸುಶಿಕ್ಷಿತ ಯುವತಿ ಆ ಕ್ಷಣದಲ್ಲಿ ವಿವೇಚನೆ ಕಳೆದುಕೊಂಡಿದ್ದರು. ಗಂಡನ ಸಾವಿನ ಆಘಾತವನ್ನು ತಾಳಲಾರದೆ, ಮನೆಯಿಂದ ಹೊರಗೆ ಓಡಿ ಬಂದ ಶಜಿಯಾ 17ನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾರೆ. ಕ್ಷಣಾರ್ಧದಲ್ಲಿ ಆಕೆಯೂ ಪ್ರಾಣ ಕಳೆದುಕೊಂಡಿದ್ದು, ಅಪಾರ್ಟ್‌ಮೆಂಟ್ ಆವರಣ ರಕ್ತದ ಮಡುವಿನಿಂದ ತುಂಬಿಹೋಯಿತು.

ಸಿದ್ದಿಪೇಟೆಯ ದಂಪತಿ ಸಾವಿನ ಸೀಕ್ರೆಟ್ ಏನು?
ತೆಲಂಗಾಣದ ಸಿದ್ದಿಪೇಟೆ ಮೂಲದ ಈ ದಂಪತಿ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದರು. ಮೇಲ್ನೋಟಕ್ಕೆ ಯಾವುದೇ ಕೊರತೆಯಿಲ್ಲದಂತೆ ಕಾಣುತ್ತಿದ್ದ ಈ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದಾದರೂ ಎಲ್ಲಿ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ. ಅನಾರೋಗ್ಯದ ಸಮಸ್ಯೆಯೋ, ದಾಂಪತ್ಯ ಕಲಹವೋ ಅಥವಾ ವಿಪರೀತ ಕೆಲಸದ ಒತ್ತಡದಿಂದ ಉಂಟಾದ ಮಾನಸಿಕ ಖಿನ್ನತೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದಂಪತಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಬೆಂಗಳೂರು ಪೊಲೀಸರು ಅಸ್ವಾಭಾವಿಕ ಸಾವು ಎಂದು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲದ ಕಾರಣ, ಮೊಬೈಲ್ ಕರೆಗಳ ವಿವರ ಮತ್ತು ಇತ್ತೀಚಿನ ಚಟುವಟಿಕೆಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ದಂಪತಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಈ ಸಾವಿನ ಸರಣಿಯ ಹಿಂದಿನ ಅಸಲಿ ಸತ್ಯ ಬಯಲಾಗಬೇಕಿದೆ.