IPL 2026: ರಾಜ್ಯದ ಶಾಸಕರಿಗೆ ಸಿಕ್ತು ಪ್ರತಿ ಪಂದ್ಯಕ್ಕೂ 3 ಫ್ರೀ ಟಿಕೆಟ್‌!!

IPL 2026: ರಾಜ್ಯದ ಶಾಸಕರಿಗೆ ಬೆಂಗಳೂರಿನಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯಕ್ಕೂ ಒಬ್ಬ ಶಾಸಕನಿಗೆ ತಲಾ ಮೂರು ಉಚಿತ ಟಿಕೆಟ್ ನೀಡಲು ಕೆಎಸ್‌ಸಿಎ ಒಪ್ಪಿಗೆ ಸೂಚಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಸೋಮವಾರ(ಮಾ.30) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಮೊದಲು ಒಬ್ಬ ಶಾಸಕನಿಗೆ ಎರಡು ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಆದರೆ ಸದನದಲ್ಲಿ ಶಾಸಕರು ಹೆಚ್ಚಿನ ಬೇಡಿಕೆ ಇಟ್ಟಿದ್ದರಿಂದ, ಇಂದಿನ ಸಭೆಯಲ್ಲಿ ಅದನ್ನು ಮೂರಕ್ಕೆ ಏರಿಕೆ ಮಾಡಲಾಗಿದೆ. ಇನ್ನೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪ್ರತಿ ಶಾಸಕನಿಗೆ ತಲಾ ಮೂರು ಟಿಕೆಟ್ ನೀಡಲಾಗುವುದು. ಹೆಚ್ಚಿನ ಟಿಕೆಟ್ ಬೇಕಿದ್ದರೆ ಮನವಿ ಮಾಡಿ. ಇಲ್ಲದಿದ್ದರೆ, ಖರೀದಿ ಮಾಡಬೇಕೆಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸನಗಳನ್ನು ಹೆಚ್ಚಿಸುವ ಕುರಿತು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಈ ಬಗ್ಗೆ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ. ಸಭೆಯಲ್ಲಿ ಭಾಗವಹಿಸಿದ್ದ ಆರ್‌ಸಿಬಿ ತಂಡದ ಸಿಇಒ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಆರ್‌ಸಿಬಿ ತಂಡದ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಡಿಕೆಶಿ ಅವರು ಜರ್ಸಿ ಧರಿಸಿ ಫೋಟೋಗೆ ಫೋಸ್ ನೀಡಿದ್ದು ವಿಶೇಷವಾಗಿತ್ತು.

ಸಭೆಯ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, “ಶಾಸಕರ ಬೇಡಿಕೆಯಂತೆ ಸ್ಪೀಕರ್ ಅವರೊಂದಿಗೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಪ್ರತಿ ಐಪಿಎಲ್ ಪಂದ್ಯಕ್ಕೆ ಮೂರು ಟಿಕೆಟ್ ನೀಡಲು ಕೆಎಸ್‌ಸಿಎ ಒಪ್ಪಿಕೊಂಡಿದೆ. ಕ್ರೀಡಾಂಗಣದ ಅಭಿವೃದ್ಧಿ ಬಗ್ಗೆಯೂ ಮಾತುಕತೆ ನಡೆದಿದೆ” ಎಂದು ತಿಳಿಸಿದರು.

ರಾಜ್ಯ ಬಜೆಟ್ ಅಧಿವೇಶನದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದ್ದ ಶಾಸಕರ “ಐಪಿಎಲ್ ಫ್ರೀ ಟಿಕೆಟ್” ಬೇಡಿಕೆಗೆ ಇದೀಗ ಅಧಿಕೃತ ಮನ್ನಣೆ ಸಿಕ್ಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯಕ್ಕೆ ಒಬ್ಬ ಶಾಸಕನಿಗೆ ತಲಾ ಮೂರು ಉಚಿತ ಟಿಕೆಟ್ ನೀಡಲು ರಾಜ್ಯ ಸರ್ಕಾರ ಮತ್ತು ಕ್ರಿಕೆಟ್ ಸಂಸ್ಥೆಗಳ ನಡುವೆ ಒಪ್ಪಂದವಾಗಿದೆ.

error: Content is protected !!