ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರಗಳನ್ನು ಘೋಷಿಸಲಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ಸಾಹಿತಿ ರೋನ್ ರೋಚ್ ಕಾಸ್ಸಿಯಾ, ಕಲಾ ಕ್ಷೇತ್ರದಲ್ಲಿ ರಾಮದಾಸ ದತ್ತಾತ್ರೇಯ ಗುಲ್ವಾಡಿ ಹಾಗೂ ಜಾನಪದ ಕ್ಷೇತ್ರದಲ್ಲಿ ಸೈರು (ಮುರಳೀಧರ) ಪುತ್ತು ನಾಯ್ಕ ಅವರು ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ತಿಳಿಸಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವ 79 ವರ್ಷದ ರೋನ್ ರೋಚ್ ಕಾಸ್ಸಿಯಾ ಅವರು 12 ಪತ್ತೇದಾರಿ ಕಾದಂಬರಿಗಳು ಸೇರಿದಂತೆ ನೂರಾರು ಸಣ್ಣಕಥೆಗಳನ್ನು ರಚಿಸಿದ್ದಾರೆ. ಕಲಾ ವಿಭಾಗದ ಪ್ರಶಸ್ತಿ ಪುರಸ್ಕೃತ 89 ವರ್ಷದ ರಾಮದಾಸ ದತ್ತಾತ್ರೇಯ ಗುಲ್ವಾಡಿ ಅವರು ರಂಗಭೂಮಿಯಲ್ಲಿ ಎಂಟು ದಶಕಗಳ ಸುದೀರ್ಘ ಅನುಭವ ಹೊಂದಿದ್ದು, ʻಸಾಂಸ್ಕೃತಿಕ ರಾಯಭಾರಿ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಮುರಳೀಧರ ಪುತ್ತು ನಾಯ್ಕ ಅವರ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ ಎಂದರು.

ಇದೇ ವೇಳೆ 2025ನೇ ಸಾಲಿನ ಪುಸ್ತಕ ಪುರಸ್ಕಾರಗಳನ್ನೂ ಪ್ರಕಟಿಸಲಾಗಿದ್ದು, ಕವನ ವಿಭಾಗದಲ್ಲಿ ಆಂಡ್ರ್ಯೂ ಎಲ್. ಡಿಕುನ್ನಾ ಅವರ ʻಉಜ್ವಾಡಾಚೆ ವೆಂಗೆಂತ್’, ಲೇಖನ ವಿಭಾಗದಲ್ಲಿ ರೋಷನ್ ಮೆಲ್ಲಿ ಸಿಕ್ವೇರಾ ಅವರ ʻಕೊಂಕ್ಣಿ ಸರ್ಕಸ್’ ಹಾಗೂ ಸಣ್ಣಕಥೆ ವಿಭಾಗದಲ್ಲಿ ರಿಚರ್ಡ್ ಅಲ್ವಾರಿಸ್ ಅವರ ʻಫಿತುರಿ’ ಕೃತಿಗಳು ಆಯ್ಕೆಯಾಗಿವೆ. ಪುರಸ್ಕೃತರೆಲ್ಲರೂ ಕೊಂಕಣಿ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ದಶಕಗಳಿಂದ ಮಹತ್ವದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಸಮಾರಂಭದ ಅಂಗವಾಗಿ ಹಾವಿಕ್, ಸಿದ್ಧಿ ಮತ್ತು ಕುಡುಬಿ ಸಮುದಾಯದ ಸಾಂಸ್ಕೃತಿಕ ನೃತ್ಯ ವೈವಿಧ್ಯಗಳು ಹಾಗೂ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ ಎಂದು ಜೋಕಿಂ ಸ್ಟ್ಯಾನಿ ಅಲ್ವಾರಿಸ್ ತಿಳಿಸಿದರು.

ಏ.26ರಂದು ಪ್ರಶಸಸಿ ಪ್ರಧಾನ ಸಮಾರಂಭ
ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 26ರ ಭಾನುವಾರ ಸಂಜೆ 5 ಗಂಟೆಗೆ ಉಡುಪಿ ಜಿಲ್ಲೆಯ ಉದ್ಯಾವರ ಚರ್ಚ್ ವಠಾರದಲ್ಲಿ ಜರುಗಲಿದೆ. ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ನವೀನ್ ಲೋಬೋ, ರೋನಾಲ್ಟಡ್ ಕ್ರಾಸ್ತಾ, ಇಲಿಯಾಸ್ ಫೆರ್ನಾಂಡೀಸ್ ಮತ್ತಿತರರಿದ್ದರು.