ಕಾರ್ಕಳ ಜಾನುವಾರು ಕಳವು ಆರೋಪಿಗಳ ವಿರುದ್ಧ ʻಕೋಕಾ’ಸ್ತ್ರ ಪ್ರಯೋಗಿಸಿ ಮರು ಬಂಧನ

ಕಾರ್ಕಳ: ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿಯಲ್ಲಿ ಕಳೆದ ವರ್ಷ ನಡೆದಿದ್ದ ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಗಳ ವಿರುದ್ಧ ಕಠಿಣವಾದ ಕೋಕಾ (KCOCA) ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ. ಇದರಿಂದಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಗಳು ಈಗ ಮತ್ತೆ ಜೈಲು ಪಾಲಾಗಿದ್ದಾರೆ.

ಕಳೆದ ವರ್ಷ ಜಯಶ್ರೀ ಪೂಜಾರಿ ಎಂಬುವವರ ಮನೆಯ ಹಟ್ಟಿಗೆ ನುಗ್ಗಿದ್ದ ಆರೋಪಿಗಳು, ಮನೆಯವರಿಗೆ ತಲವಾರು ತೋರಿಸಿ ಬೆದರಿಕೆ ಹಾಕಿದ್ದರು. ನಂತರ ಹಟ್ಟಿಯಲ್ಲಿದ್ದ ಸುಮಾರು 35,000 ರೂ. ಮೌಲ್ಯದ ಮೂರು ಜಾನುವಾರುಗಳನ್ನು ಕಳವು ಮಾಡಿ, ವಾಹನದಲ್ಲಿ ಸಾಗಿಸಿ ವಧೆ ಮಾಡಿದ್ದರು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ದರೋಡೆ ಮತ್ತು ಜಾನುವಾರು ಕಳವು ಪ್ರಕರಣ ದಾಖಲಾಗಿತ್ತು.

ಈ ಹಿಂದೆ ತನಿಖೆ ನಡೆಸಿದ್ದ ಕಾರ್ಕಳ ಸಿಪಿಐ ನೇತೃತ್ವದ ತಂಡವು ಮೊಹಮ್ಮದ್ ಯೂನಿಸ್ (31), ಮೊಹಮ್ಮದ್ ಇಕ್ಬಾಲ್ (29) ಮತ್ತು ನಾಸಿರ್ (28) ಎಂಬುವವರನ್ನು ಬಂಧಿಸಿತ್ತು. ಈ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದರು. ಆದರೆ, ತನಿಖೆ ಮುಂದುವರಿದಂತೆ ಇವರು ಸಂಘಟಿತವಾಗಿ ಅಪರಾಧ ಎಸಗುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಪೊಲೀಸರು ಇವರ ವಿರುದ್ಧ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಾದ ʻಕೋಕಾ’ ಅನ್ವಯಿಸಲು ಅನುಮತಿ ಪಡೆದರು.

ಕಾಯ್ದೆ ಅನ್ವಯವಾದ ಬೆನ್ನಲ್ಲೇ ಆರೋಪಿಗಳ ಜಾಮೀನು ರದ್ದಾಗಿದ್ದು, ಮೊಹಮ್ಮದ್ ಯೂನಿಸ್, ನಾಸಿರ್ ಮತ್ತು ನಾಲ್ಕನೇ ಆರೋಪಿ ಶೌಕತ್ ಆಲಿ (36) ಎಂಬುವವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಪ್ರಸ್ತುತ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಂಘಟಿತ ಅಪರಾಧಗಳಲ್ಲಿ ತೊಡಗುವವರ ವಿರುದ್ಧ ಇಲಾಖೆ ಇಂತಹ ಕಠಿಣ ಕ್ರಮಗಳನ್ನು ಮುಂದುವರಿಸಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

error: Content is protected !!