ಕೊಣಾಜೆ: ಪಂಚಾಯತ್‌ ನಿರ್ಮಿಸಿದ ಮಳೆ ನೀರಿನ ತೋಡನ್ನೇ ಮುಚ್ಚಿದ ಭೂಪ! ಪ್ರಶ್ನಿಸಿದ ನೆರೆಮನೆಯವರಿಗೆ ಕಲ್ಲಿನಿಂದ ಹಲ್ಲೆ, ಪೊಲೀಸರಿಗೆ ದೂರು!


ಉಳ್ಳಾಲ: ಪಂಚಾಯತ್‌ ನಿರ್ಮಿಸಿದ ಮಳೆ ನೀರಿನ ತೋಡನ್ನು ಮುಚ್ಚಿದ ಭೂಪನೋರ್ವನ ಕೃತ್ಯವನ್ನು ಪ್ರಶ್ನಿಸಿದ ನೆರೆಮನೆಯ ಇಬ್ಬರು ಮಹಿಳೆಯರು ಹಾಗೂ ಯುವಕನಿಗೆ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಪಟ್ನಮೊಗರು ಎಂಬಲ್ಲಿ ಇಂದು ನಡೆದಿದೆ. ಆರೋಪಿಯನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಪಟ್ನಮೊಗರು ನಿವಾಸಿ ನಾಗೇಶ್‌ ಶೇಣವ ಹಲ್ಲೆ ನಡೆಸಿರುವ ವ್ಯಕ್ತಿಯಾಗಿದ್ದು, ನೆರೆಮನೆಯ ಬೇಬಿ(56), ಅವರ ಪುತ್ರ ರವಿರಾಜ್‌ ಮತ್ತು ಸೊಸೆ ವರ್ಷಾ ಎಂಬವರು ಹಲ್ಲೆಗೊಳಗಾದವರು. ಇಂದು ಬೆಳಿಗ್ಗೆ 8.30 ರ ಸುಮಾರಿಗೆ ನಾಗೇಶ್‌ ಶೇಣವ ತನ್ನ ಅಂಗಳದಲ್ಲಿ ಹಲವು ವರ್ಷಗಳಿಂದ ಹಾದುಹೋಗುವ , ಪಂಚಾಯತ್‌ ನಿರ್ಮಿಸಿದ್ದಂತಹ ಮಳೆ ನೀರಿನ ತೋಡಿನ ಛೇಂಬರನ್ನು ಅಗೆದು, ಇಟ್ಟಿಗೆಯಿಂದ ಸಂಪೂರ್ಣವಾಗಿ ಮುಚ್ಚಿದ್ದಾನೆ. ಇದನ್ನು ನೆರೆಮನೆಯ ರವಿರಾಜ್‌ ಅವರು ಪ್ರಶ್ನಿಸಿದ್ದಾರೆ. ಈ ವೇಳೆ ನಾಗೇಶ್ ಶೇಣವ ಅವರ ಕೆನ್ನೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಮುಂದಾದ ಬೇಬಿ ಅವರಿಗೆ ಸ್ಥಳದಲ್ಲಿದ್ದ ಕಲ್ಲನ್ನು ಕಾಲಿಗೆ ಎಸೆದು ಗಂಭೀರ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ. ಅದನ್ನು ಪ್ರಶ್ನಿಸಿದ ಸೊಸೆ ವರ್ಷಾ ಅವರ ಮೇಲೂ ಕಲ್ಲಿನಿಂದ ಹಲ್ಲೆಯನ್ನು ನಡೆಸಿದ್ದಾನೆ.

ಈ ಕುರಿತು ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ದೂರಿನಂತೆ ಬಿಎನ್‌ ಎಸ್‌ ಆಕ್ಟ್‌ ನಡಿ ಪ್ರಕರಣ ದಾಖಲಾಗಿದೆ

error: Content is protected !!