ನೋಯ್ಡಾದ ಜೇವರ್ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಉದ್ಘಾಟಿಸಿದ ಪ್ರದಾನಿ ಮೋದಿ

ನವದೆಹಲಿ: ಸುಮಾರು 11,200 ಕೋಟಿ ರೂ. ವೆಚ್ಚದಲ್ಲಿ ಜೇವರ್‌ನಲ್ಲಿ ನಿರ್ಮಿಸಲಾದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಮಾ.28) ಉದ್ಘಾಟಿಸಿದರು.

ಇಂದು ಮಧ್ಯಾಹ್ನ ಗ್ರೇಟರ್‌ ನೋಯ್ಡಾದ ಜೇವರ್‌ಗೆ ಆಗಮಿಸಿದ ಪ್ರಧಾನಿ, ಹಿರಿಯ ಅಧಿಕಾರಿಗಳು ಮತ್ತು ಗಣ್ಯರ ಸಮ್ಮುಖದಲ್ಲಿ ವಿಮಾನ ನಿಲ್ದಾಣ ಉದ್ಘಾಟಿಸಿದರು. ಮೊದಲ ಹಂತದ ಏರ್‌ಪೋರ್ಟ್‌ನಿಂದ ದೆಹಲಿ-ಎನ್‌ಸಿಆರ್ ಸಂಪರ್ಕಕ್ಕೆ ಉತ್ತೇಜನ ಸಿಗಲಿದೆ. ಜೊತೆಗೆ ಉತ್ತರ ಪ್ರದೇಶ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಮುಂದಿನ ತಿಂಗಳಿಂದಲೇ ವಾಣಿಜ್ಯ ಕಾರ್ಯಾಚರಣೆಗಳನ್ನೂ ಜೇವರ್‌ ಏರ್‌ಪೋರ್ಟ್‌ ಶುರು ಮಾಡಲಿದೆ.

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗಳಲ್ಲಿ ಒಂದಾಗಿದೆ ಮತ್ತು ವಿಮಾನ ನಿಲ್ದಾಣದ ಮೊದಲ ಹಂತವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯ ಅಡಿಯಲ್ಲಿ ಸುಮಾರು 11,200 ಕೋಟಿ ರೂ.ಗಳ ಒಟ್ಟು ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹಂತ-1 ರಲ್ಲಿ ಖಾಸಗಿ ಕಂಪನಿ 6,876 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ ಎಂದು ಕೇಂದ್ರ ಹೇಳಿದೆ, ಆದರೆ ರಾಜ್ಯವು ಭೂಸ್ವಾಧೀನಕ್ಕಾಗಿ 4,406 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.

ವಿಮಾನ ನಿಲ್ದಾಣವು ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದ ನಂತರ, ಉತ್ತರ ಪ್ರದೇಶವು 5 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಗಲಿದೆ, ಜೇವರ್ ಅನ್ನು ಉತ್ತರ ಭಾರತದ ಪ್ರಮುಖ ವಾಯುಯಾನ ಕೇಂದ್ರವಾಗಿ ಇರಿಸಲಿದೆ.

error: Content is protected !!