ಉಡುಪಿ: ಕಾರೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮಣಿಪಾಲದ ಈಶ್ವರನಗರದ ಬಳಿ ಗುರುವಾರ(ಮಾ.26) ತಡರಾತ್ರಿ ನಡೆದಿದೆ.

ಅಪಘಾತದ ಬಳಿಕ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದು, ನಂತರ ಪೊಲೀಸರು ಮಂಚಿ ಕುಮೇರಿ ಬಳಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಬೆಳ್ತಂಗಡಿ ಮೂಲದ ವಿನೀಶ್ ಮತ್ತು ವೀರಪ್ಪ ಎಂಬುವವರು ಈಶ್ವರನಗರದ ರೆಸ್ಟೋರೆಂಟ್‌ವೊಂದರಲ್ಲಿ ಕೆಲಸ ಮುಗಿಸಿ ಹಿಂತಿರುಗುತ್ತಿದ್ದರು. ಅವರು ರಸ್ತೆಯ ಡಿವೈಡರ್ ದಾಟಿ ನಡೆದುಕೊಂಡು ಹೋಗುತ್ತಿದ್ದಾಗ ಪೆಟ್ರೋಲ್ ಬಂಕ್ ಕಡೆಯಿಂದ ಈಶ್ವರನಗರದ ಜನನಿ ಲಾಡ್ಜ್ ಕಡೆಗೆ ಅತೀ ವೇಗವಾಗಿ ವಿರುದ್ಧ ದಿಕ್ಕಿನಲ್ಲಿ ಬಂದ ಕಾರು ವೀರಪ್ಪ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವೀರಪ್ಪ ಅವರ ತಲೆ, ಕಾಲು ಮತ್ತು ಸೊಂಟದ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯ ವೇಳೆ ಅಪಘಾತ ಎಸಗಿದ ಕಾರು ಮಂಚಿ ಕುಮೇರಿ ಬಳಿ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.