ಬೆಂಗಳೂರು: ರಾಜಕಾರಣದಲ್ಲಿ ಯಾವುದೂ ಕಾರಣವಿಲ್ಲದೆ ನಡೆಯಲ್ಲ! ಸಾಮಾನ್ಯವಾಗಿ ಐದು ವರ್ಷದ ಅವಧಿ ಮುಗಿಯುವಾಗ ನಡೆಯಬೇಕಿದ್ದ ಶಾಸಕರ ‘ಸಮೂಹ ಫೋಟೋ ಶೂಟ್’, ಅವಧಿಗೆ ಎರಡು ವರ್ಷ ಮುಂಚಿತವಾಗಿಯೇ ಅಂದರೆ ಇಂದು ವಿಧಾನಸೌಧದ ಮುಂಭಾಗದಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಫೋಟೋ ಶೂಟ್ ಈಗ ರಾಜ್ಯ ರಾಜಕೀಯ ವಲಯದಲ್ಲಿ ಅಕ್ಷರಶಃ ಭೂಕಂಪ ಸೃಷ್ಟಿಸಿದೆ.

ಸ್ಪೀಕರ್ ಖಾದರ್ ಗುಟ್ಟೇನು?
ವಿಧಾನಸಭೆಯ ಅವಧಿ ಮುಗಿಯಲು ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಸ್ಪೀಕರ್ ಯು.ಟಿ. ಖಾದರ್ ಅವರು ಹಠಾತ್ ಆಗಿ ಈ ಫೋಟೋ ಶೂಟ್ ಆಯೋಜಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಮಂಗಳವಾರ ವಿಧಾನ ಪರಿಷತ್ ಸದಸ್ಯರ ಫೋಟೋ ಶೂಟ್ ಮುಗಿದ ಬೆನ್ನಲ್ಲೇ ಇಂದು ಶಾಸಕರೆಲ್ಲರೂ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ. “ಇದು ಸಂಪ್ರದಾಯ” ಅಂತ ಸ್ಪೀಕರ್ ಕಚೇರಿ ಹೇಳ್ತಿದ್ರೂ, ರಾಜಕೀಯ ಪಂಡಿತರು ಮಾತ್ರ ಇದರ ಹಿಂದೆ ದೊಡ್ಡ ‘ಗೇಮ್ ಪ್ಲಾನ್’ ಇದೆ ಅಂತಿದ್ದಾರೆ!

ಅಧಿಕಾರ ಹಸ್ತಾಂತರದ ಸುಳಿವು!
ಈ ಫೋಟೋ ಶೂಟ್ ಬೆನ್ನಲ್ಲೇ ಗಾಂಧಿನಗರದ ಗಲ್ಲಿಗಳಲ್ಲಿ ಒಂದು ಗಟ್ಟಿ ವದಂತಿ ಹರಿದಾಡ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಅರ್ಧ ಅವಧಿ ಪೂರೈಸುತ್ತಿರುವ ಈ ಹೊತ್ತಿನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಬಿಟ್ಟುಕೊಟ್ಟು ಡಿ.ಕೆ. ಶಿವಕುಮಾರ್ ಅವರಿಗೆ ಪಟ್ಟಾಭಿಷೇಕ ಮಾಡಲಿದ್ದಾರೆಯೇ? ಎಂಬ ಪ್ರಶ್ನೆ ಕಾಡ್ತಿದೆ. ಈ ಫೋಟೋ ಶೂಟ್ ಹಾಲಿ ಶಾಸಕರ ಮತ್ತು ಸಚಿವರ ಪಾಲಿಗೆ ಕೊನೆಯ ಗ್ರೂಪ್ ಫೋಟೋ ಆಗಲಿದೆಯೇ ಎಂಬ ಚರ್ಚೆ ದಟ್ಟವಾಗಿದೆ.

ಸಂಪುಟಕ್ಕೆ ಮೇಜರ್ ಸರ್ಜರಿ.. ಯಾರಿಗೆ ಸಿಗುತ್ತೆ ಮಂತ್ರಿ ಗಿರಿ?
ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆಯೇ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆ ಖಚಿತ ಎನ್ನಲಾಗುತ್ತಿದೆ. 30ಕ್ಕೂ ಹೆಚ್ಚು ಹೊಸ ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿ ಮಟ್ಟದಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಹಿರಿಯ ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕುವ ಮೇಜರ್ ಸರ್ಜರಿಗೆ ಸಿದ್ಧತೆ ನಡೆದಿದೆ. ಅಷ್ಟೇ ಅಲ್ಲ, ಸ್ಪೀಕರ್ ಯು.ಟಿ. ಖಾದರ್ ಅವರೇ ಸ್ಪೀಕರ್ ಸ್ಥಾನ ಬಿಟ್ಟು ಸಚಿವರಾಗಲಿದ್ದಾರೆ ಎಂಬ ಗುಸುಗುಸು ಕೂಡ ಜೋರಾಗಿದೆ!
