ಊಟದ ವಿಚಾರಕ್ಕೆ ಶುರುವಾದ ಜಗಳ.. ಮಗಳೊಂದಿಗೆ ಮಾಯವಾದಳು ಹೆಂಡತಿ!  

ಉಡುಪಿ: ಸಂಸಾರ ಅಂದಮೇಲೆ ಸಣ್ಣಪುಟ್ಟ ಜಗಳಗಳು ಮಾಮೂಲಿ. ಆದರೆ ಒಂದು ಹೊತ್ತಿನ ಊಟದ ವಿಚಾರಕ್ಕೆ ಶುರುವಾದ ಕಿರಿಕಿರಿ ಇಷ್ಟೊಂದು ಭೀಕರ ರೂಪ ಪಡೆದುಕೊಳ್ಳುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ! ಉಡುಪಿಯ ಬೆಳಪು ಗ್ರಾಮದ ಪುಂಚಲಕಾಡಿನಲ್ಲಿ ಈಗ ಪತಿಯೊಬ್ಬರು ತನ್ನ ಪತ್ನಿ ಮತ್ತು ಅಪ್ರಾಪ್ತ ಮಗಳಿಗಾಗಿ ಕಣ್ಣೀರು ಹಾಕುತ್ತಾ ಬೀದಿ ಬೀದಿ ಅಲೆಯುವಂತಾಗಿದೆ.

ಮಾರ್ಚ್ 20ರ ಮಧ್ಯಾಹ್ನ ಸಣ್ಣದೊಂದು ಮಾತಿನ ಚಕಮಕಿ ನಡೆದಿದೆ. ವಿಷಯವೇನೆಂದರೆ ಅದು ಕೇವಲ ಊಟದ ವಿಚಾರ! ರೇಣುಕಾ ಗಂಗಾಧರ್ ಪೂಜೇರ್ (28) ಮತ್ತು ಪತಿ ಗಂಗಾಧರ್ ನಡುವೆ ಇದೇ ವಿಚಾರಕ್ಕೆ ಸಣ್ಣ ಮಟ್ಟದ ಜಗಳವಾಗಿದೆ. ಜಗಳದ ನಂತರ ಗಂಗಾಧರ್ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ಅವರಿಗೆ ಕಾದಿತ್ತು ದೊಡ್ಡ ಶಾಕ್!

ಗಂಗಾಧರ್ ಮನೆಗೆ ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಲಾಗಿತ್ತು. ಪತ್ನಿ ರೇಣುಕಾ ಅವರು ತಮ್ಮ 11 ವರ್ಷದ ಪುತ್ರಿ ಪ್ರತೀಕ್ಷಾಳನ್ನು ಕರೆದುಕೊಂಡು ಎಲ್ಲಿಗೋ ಹೊರಟು ಹೋಗಿದ್ದಾರೆ. ವಿಚಿತ್ರ ಅಂದ್ರೆ, ರೇಣುಕಾ ಅವರು ತಮ್ಮ ಮೊಬೈಲ್ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ! ಇದು ಈಗ ಪೊಲೀಸರನ್ನೂ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಫೋನ್ ಇಲ್ಲದೆ, ಯಾವುದೇ ಸುಳಿವು ನೀಡದೆ ಮಗಳೊಂದಿಗೆ ನಾಪತ್ತೆಯಾಗಿರೋದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಪತಿ ಗಂಗಾಧರ್ ಅವರು ಸಂಬಂಧಿಕರ ಮನೆ, ಪರಿಚಯಸ್ಥರ ಬಳಿ ಎಲ್ಲೆಡೆ ಹುಡುಕಾಡಿದರೂ ಪತ್ನಿ-ಮಗಳ ಸುಳಿವು ಸಿಕ್ಕಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಶಿರ್ವ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಆ ಪುಟ್ಟ ಮಗು ಮತ್ತು ತಾಯಿ ಈಗ ಎಲ್ಲಿದ್ದಾರೆ? ಕ್ಷಣಿಕ ಆವೇಶಕ್ಕೆ ಬಿದ್ದು ಮಾಡಿದ ಈ ನಿರ್ಧಾರ ಎಲ್ಲಿಗೆ ಹೋಗಿ ತಲುಪಲಿದೆ? ಅನ್ನೋದು ಈಗ ಇಡೀ ಗ್ರಾಮದ ಆತಂಕಕ್ಕೆ ಕಾರಣವಾಗಿದೆ.

error: Content is protected !!