ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣಕ್ಕೆ ಶಶಿಧರ ಶೆಟ್ಟಿ ಬರೋಡಾ 1.25 ಕೋಟಿ ರೂ. ದೇಣಿಗೆ

ಮಂಗಳೂರು: ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಡಿಸೆಂಬರ್ ನಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ. ಸದಾಶಿವ ಶೆಟ್ಟಿ ಸಂಕೀರ್ಣಕ್ಕೆ 1.25 ಕೋಟಿ ರೂಪಾಯಿ ನೆರವುವ ನೀಡುವುದಾಗಿ ತಿಳಿಸಿದರು. ಸಭಾಭವನ ಪೂರ್ಣಗೊಳ್ಳಲು ಎಲ್ಲಾ ಬಂಟ ಬಂಧುಗಳ‌ ಸಹಕಾರ ಬೇಕು ಎಂದು ಒಕ್ಕೂಟದ ಮಹಾ ನಿರ್ದೇಶಕ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ತಿಳಿಸಿದರು.

ಮುಲ್ಕಿಯಲ್ಲಿರುವ ಪ್ರವೀಣ್ ಭೋಜ ಶೆಟ್ಟಿ ಸಂಕೀರ್ಣದಲ್ಲಿ ನಡೆದ ಸದಾಶಿವ ಶೆಟ್ಟಿ ಸಂಕೀರ್ಣದ ದ್ವಿತೀಯ ಹಂತದ ಕಾಮಗಾರಿ ಕುರಿತು ನಡೆದ ವಿಶೇಷ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಇನ್ನು ಏಳೆಂಟು ತಿಂಗಳಿನ ಒಳಗೆ ಸಭಾಭವನದ ನಿರ್ಮಾಣ ಆಗ ಬೇಕಾಗಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿರುವ ದಾನಿಗಳು ನೆರವಿನ ಹಸ್ತ ನೀಡ ಬೇಕಾಗಿದೆ. ಅಲ್ಲದೆ ಸಮಾಜದ ಪ್ರತಿಯೋರ್ವರು ಈ ಒಂದು ಸಮಾಜದ ಕಾರ್ಯದಲ್ಲಿ ಕೈಜೋಡಿಸ ಬೇಕು. ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿಯವರ ಆಶಯ, ಆಶೀರ್ವಾದದಿಂದ ಹವಾನಿಯಂತ್ರಿತ ಸಭಾಭವನ ಸಮಾಜದ ಮಧ್ಯಮ ವರ್ಗದಿಂದ ಎಲ್ಲಾ ಜನರಿಗೂ ಇದರ ಪ್ರಯೋಜನ ದೊರೆಯ ಬೇಕೆಂದು ತಿಳಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಸಂಕೀರ್ಣದ ಕೆಲಸ ಪ್ರಗತಿಯಲ್ಲಿದೆ. ಸಂಕೀರ್ಣದಲ್ಲಿ ಶಶಿರೇಖಾ ಆನಂದ ಶೆಟ್ಟಿ ಹೆಸರಿನಲ್ಲಿ ವೇದಿಕೆ ಇದೆ. ಇದರ ಜತೆಗೆ ಇನ್ನೊಂದು ಸಭಾಂಗಣ, ಧರ್ಮಚಾವಡಿ, ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಛೇರಿ ಇದೆ. ಸಭಾಭವನ ನಿರ್ಮಾಣಕ್ಕೆ ಹಲವು ಮಂದಿ ದಾನಿಗಳು ನೆರವು ನೀಡುವ ಭರವಸೆ ನೀಡಿದ್ದಾರೆ.‌ ಅವರೆಲ್ಲರನ್ನು ಸಂಪರ್ಕಿಸಲಾಗುವುದು ಎಂದರು.‌ ಸಭಾಭವನಕ್ಕೆ ಐದು ಲಕ್ಷ ರೂಪಾಯಿಗೂ ಮಿಕ್ಕಿ ಧನ‌ ಸಹಾಯ ನೀಡಿದವರ ಭಾವಚಿತ್ರವನ್ನು ಆಡಳಿತ ಕಛೇರಿಯಲ್ಲಿ ಹಾಕಲಾಗುವುದು ಎಂದರು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಒಕ್ಕೂಟಕ್ಕೆ ಒಂದು ಎಕ್ರೆ ಜಾಗ ನೀಡುವ ಬದಲು ಸಭಾಭವನಕ್ಕೆ ಐವತ್ತು ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಉದ್ಯಮಿ ರಾಕ್ಷಿ ಡೆವಲಪರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ರಾಜೇಶ್ ಶೆಟ್ಟಿ, ಯುವ ವಿಭಾಗದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್, ಕಟ್ಟಡ ವಿನ್ಯಾಸಕಾರ ಎ ಜಿ ಭಟ್, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಉದ್ಯಮಿ ಹರೀಶ್ ಶೆಟ್ಟಿ ಮುಂಬೈ, ಸಂಚಾಲಕ ಕೊಲ್ಲಾಡಿ ಬಾಲಕೃಷ್ಣ ರೈ, ವಿವಿಧ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅನೂಪ್ ಶೆಟ್ಟಿ ಸುರತ್ಕಲ್ ಪ್ರಾರ್ಥಿಸಿದರು. ಚಂದ್ರಹಾಸ ಶೆಟ್ಟಿ ವಂದಿಸಿದರು. ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮ‌ ನಿರೂಪಿಸಿದರು.

error: Content is protected !!