ಬೆಳಗಾವಿ: ಹೆಂಡತಿ ಮಲಗಿರುವಾಗಲೇ ಆಕೆಯನ್ನು ನಡುರಸ್ತೆಗೆ ಎಳೆದೊಯ್ದು ಪತಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಶಿವಕ್ಕ ಜೋಡಳ್ಳಿ(33) ಹತ್ಯೆಗೀಡಾದ ಮಹಿಳೆ. ಬಸವರಾಜ ಜೋಡಳ್ಳಿ ಆರೋಪಿ. ತಾಯಿಗೆ ಬೈದಿದ್ದಕ್ಕೆ ಮತ್ತು ಆಕೆಯ ಶೀಲವನ್ನು ಶಂಕಿಸಿ ಬಸವರಾಜ ಜೋಡಳ್ಳಿ ಕೊಲೆ ಮಾಡಿರುವುದಾಗಿ ಎನ್ನಲಾಗಿದೆ.
ಮೊದಲ ಗಂಡನ ಅಕಾಲಿಕ ಮರಣದ ನಂತರ ಶಿವಕ್ಕ ಬಸವರಾಜ ಜೋಡಳ್ಳಿಯನ್ನ ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಇಬ್ಬರು 15 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು. ಆದರೆ ಗಂಡನ ಕಿರುಕುಳಕ್ಕೆ ಬೇಸತ್ತ ಶಿವಕ್ಕ ತನ್ನಿಬ್ಬರು ಮಕ್ಕಳ ಜೊತೆಗೆ ಪ್ರತ್ಯೇಕವಾಗಿ ಮಠವೊಂದರಲ್ಲಿ ವಾಸವಾಗಿದ್ದರು.

ಇಬ್ಬರು ಮಕ್ಕಳ ಜೊತೆಗೆ ವಾಸವಾಗಿದ್ದ ಶಿವಕ್ಕ, ಮೊದಲ ಮಗಳನ್ನ ಗಂಡನ ಮನೆಯಲ್ಲಿ ಬಿಟ್ಟಿದ್ದಳು. ಮಗಳನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅಂತಾ ಅತ್ತೆ ಜೊತೆಗೆ ಫೊನ್ನಲ್ಲಿ ಜಗಳವಾಡಿದ್ದಾರೆ. ತಾಯಿಗೆ ಬೈದಿದ್ದಕ್ಕೆ ಮತ್ತು ಪತ್ನಿ ಶೀಲ ಶಂಕಿಸಿ ಶಿವಕ್ಕ ಮಲಗಿದಾಗಲೇ ಎಳೆದೊಯ್ದು ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಪ್ರತ್ಯಕ್ಷದರ್ಶಿಯೊಬ್ಬರು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಬೆಳಗ್ಗೆ ಸುಮಾರು 7:30ರ ಸುಮಾರಿಗೆ ಘಟನೆ ನಡೆದಿದೆ. ಮೊದಲು ಪತ್ನಿ ಮೇಲೆ ಹಲ್ಲೆ ಮಾಡಿದ್ದು, ನಂತರ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಕಲ್ಲಿನಿಂದ ಬಜ್ಜಿ ಕೊಂದಿದ್ದಾನೆ. ಈ ದಂಪತಿಗೆ ಇಬ್ಬರು ಗಂಡು ಹಾಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ. ಹೆಣ್ಣು ಮಗಳು ಸದ್ಯ ಅವರ ತಾಯಿಯ ಸಹೋದರನ ಬಳಿ ಇದ್ದಾಳೆ.

ಪತಿ ಬಸವರಾಜ್ ಜೋಡಳ್ಳಿ ವೃತ್ತಿಯಲ್ಲಿ ಡ್ರೈವರ್ ಆಗಿದ್ದಾನೆ. ಈ ದಂಪತಿ ಆಗಾಗ ಜಗಳವಾಡುತ್ತಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಜಗಳದಿಂದಾಗಿ ಪತಿ ಊರು ಬಿಟ್ಟು ಹೋಗಿದ್ದ. ಇತ್ತೀಚೆಗಷ್ಟೇ ಗ್ರಾಮಕ್ಕೆ ಮರಳಿದ್ದ. ಕಳೆದ ಎರಡು-ಮೂರು ವರ್ಷಗಳಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು ಎಂದು ಹೇಳಿದ್ದಾರೆ.
ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.