ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ತಡೆ ಒಪ್ಪಲು ಸಾಧ್ಯವಿಲ್ಲ;  ಇಂಧನ ಪೂರೈಕೆಗೆ ಅಡ್ಡಿಯಾದಲ್ಲಿ ಕಠಿಣ ನಿಲುವು: ಪ್ರಧಾನಿ ಮೋದಿ ಎಚ್ಚರಿಕೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಅಮೆರಿಕಾ-ಇರಾನ್ ಸಂಘರ್ಷದ ನಡುವೆ, ವಿಶ್ವದ ತೈಲ ಪೂರೈಕೆಯ ಜೀವನಾಡಿಯಾಗಿರುವ ಹೋರ್ಮುಜ್ ಜಲಸಂಧಿಯಲ್ಲಿ (Strait of Hormuz) ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದನ್ನು ಭಾರತವು ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಗುಡುಗಿದ್ದಾರೆ. ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಜಲಮಾರ್ಗಗಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹೋರ್ಮುಜ್ ಬಿಕ್ಕಟ್ಟು ಮತ್ತು ಭಾರತದ ಆಕ್ಷೇಪ:
ವಿಶ್ವದ ಒಟ್ಟು ಕಚ್ಚಾ ತೈಲದ ಐದನೇ ಒಂದು ಭಾಗ ಹರಿಯುವ ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ತಡೆಯೊಡ್ಡುತ್ತಿರುವುದು ಅಂತರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಾಗಿದೆ. “ಜಲಸಂಧಿಯ ಮೇಲೆ ಯಾರದ್ದೇ ಹತೋಟಿ ಇರಲಿ, ಮುಕ್ತ ವ್ಯಾಪಾರ ಮತ್ತು ಹಡಗುಗಳ ಸಂಚಾರವನ್ನು ತಡೆಯುವುದು ಸ್ವೀಕಾರಾರ್ಹವಲ್ಲ. ಇಂಧನ ಮತ್ತು ಸಾರಿಗೆ ಮೂಲಸೌಕರ್ಯಗಳ ಮೇಲೆ ನಡೆಯುವ ದಾಳಿಗಳನ್ನು ಭಾರತ ಬಲವಾಗಿ ವಿರೋಧಿಸುತ್ತದೆ,” ಎಂದು ಪ್ರಧಾನಿ ತಿಳಿಸಿದರು. ಈ ಬಿಕ್ಕಟ್ಟಿನ ನಡುವೆಯೂ ಭಾರತದ ರಾಜತಾಂತ್ರಿಕ ಚತುರತೆಯಿಂದಾಗಿ ಅಲ್ಲಿ ಸಿಲುಕಿದ್ದ ಹಲವು ಭಾರತೀಯ ಹಡಗುಗಳು ಸುರಕ್ಷಿತವಾಗಿ ದೇಶಕ್ಕೆ ಮರಳಿವೆ ಎಂದು ಅವರು ಮಾಹಿತಿ ನೀಡಿದರು.

ಹೋರ್ಮುಜ್ ಜಲಸಂಧಿಯ ಅಸ್ಥಿರತೆಯಿಂದಾಗಿ ಭಾರತದ ಇಂಧನ ಭದ್ರತೆಗೆ ಧಕ್ಕೆಯಾಗದಂತೆ ಸರ್ಕಾರವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಈ ಹಿಂದೆ ಭಾರತವು 27 ದೇಶಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿತ್ತು, ಆದರೆ ಈಗ ಆ ವ್ಯಾಪ್ತಿಯನ್ನು 41 ದೇಶಗಳಿಗೆ ವಿಸ್ತರಿಸಲಾಗಿದೆ. ಈ ವೈವಿಧ್ಯೀಕರಣದ ಮೂಲಕ ಪಶ್ಚಿಮ ಏಷ್ಯಾದ ಮೇಲಿನ ಅತಿಯಾದ ಅವಲಂಬನೆಯನ್ನು ತಗ್ಗಿಸಲಾಗಿದ್ದು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದಾಸ್ತಾನು ಸಮರ್ಪಕವಾಗಿದೆ ಎಂದು ಪ್ರಧಾನಿ ಅಭಯ ನೀಡಿದರು.

ಯುದ್ಧ ಪೀಡಿತ ಇರಾನ್‌ನಿಂದ ಈಗಾಗಲೇ 1,000ಕ್ಕೂ ಹೆಚ್ಚು ಭಾರತೀಯರನ್ನು (ಇದರಲ್ಲಿ 700ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಸೇರಿದ್ದಾರೆ) ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿದೆ. “ಪಶ್ಚಿಮ ಏಷ್ಯಾದಲ್ಲಿರುವ ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಆ ವಲಯದ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ,” ಎಂದು ಮೋದಿ ವಿವರಿಸಿದರು.

ಯುದ್ಧವು ದೀರ್ಘಕಾಲ ಮುಂದುವರಿದಲ್ಲಿ ಉಂಟಾಗಬಹುದಾದ ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತ ಸನ್ನದ್ಧವಾಗಿದೆ. ಕೃಷಿ, ರಸಗೊಬ್ಬರ ಮತ್ತು ಸಣ್ಣ ಕೈಗಾರಿಕೆಗಳ (MSME) ಮೇಲೆ ಯುದ್ಧದ ಬಿಸಿ ತಟ್ಟದಂತೆ ಕ್ಯಾಬಿನೆಟ್ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ನಿಗಾವಹಿಸಿದೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ಎಲ್‌ಪಿಜಿ ಪೂರೈಕೆಯಲ್ಲಿ ಗೃಹಬಳಕೆಗೆ ಮೊದಲ ಆದ್ಯತೆ ನೀಡಲು ಸೂಚಿಸಲಾಗಿದೆ ಎಂದು ಪ್ರಧಾನಿ ಸವಿಸ್ತಾರವಾಗಿ ತಿಳಿಸಿದರು.

 

error: Content is protected !!