ಬೃಹತ್‌ ಎಂಡಿಎಂಎ ಮಾರಾಟ ಜಾಲ ಪತ್ತೆ, ಮೂವರು ಆರೋಪಿಗಳ ಬಂಧನ

ಮಂಗಳೂರು: ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ನಿನ್ನೆ ಪಂಪ್‌ವೆಲ್ ಮತ್ತು ಎಕ್ಕೂರು ಪರಿಸರದಲ್ಲಿ ಆಟೋ ರಿಕ್ಷಾವೊಂದರಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿಗಳಾದ ಹೈದರ್ ಅಲಿಯಾಸ್ ಹೈದರ್ ಆಲಿ (53), ಮೊಹಮ್ಮದ್ ಸಜಾದ್ (29) ಮತ್ತು ಉಡುಪಿ ಜಿಲ್ಲೆಯ ಶಿರ್ವ ಮೂಲದ, ಸದ್ಯ ಪಂಪ್‌ವೆಲ್ ಉಜ್ಜೋಡಿಯಲ್ಲಿ ವಾಸವಿದ್ದ ಜೈಸನ್ ಮೆನೆಜಸ್ (26) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಸುಮಾರು 2,50,000 ರೂ. ಮೌಲ್ಯದ 26 ಗ್ರಾಂ ಎಂಡಿಎಂಎ ಮಾದಕ ವಸ್ತು, 37,000 ರೂ. ನಗದು ಹಣ, 5 ಮೊಬೈಲ್ ಫೋನ್‌ಗಳು, ಡಿಜಿಟಲ್ ತೂಕ ಮಾಪನ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾ ಸೇರಿದಂತೆ ಒಟ್ಟು 4,37,500 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಪೈಕಿ ಹೈದರ್ ಆಲಿ ಎಂಬಾತ ಹಳೆಯ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಈತನ ಮೇಲೆ ಈ ಹಿಂದೆ ಮಂಗಳೂರು ಪೂರ್ವ ಠಾಣೆಯಲ್ಲಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ 2024ರಲ್ಲಿ ಮಾದಕ ವಸ್ತು ಮಾರಾಟ ಮಾಡಿದ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪವೂ ಈತನ ಮೇಲಿದೆ.

ಈ ಮಾದಕ ವಸ್ತು ಮಾರಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಕಂಕನಾಡಿ ನಗರ ಪೊಲೀಸರು ಮತ್ತು ಸಿಸಿಬಿ ಘಟಕದ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

error: Content is protected !!