ಬಿಎಲ್‌ಓ ಆತ್ಮಹತ್ಯೆ- ಕೆಲಸದ ಒತ್ತಡ ಆರೋಪಿಸಿ ಸಾರ್ವಜನಿಕರ ಪ್ರತಿಭಟನೆ: ತಿರುವು ನೀಡಿದ ಡೆತ್‌ನೋಟ್!

ಕಾಸರಗೋಡು: ಶಾಲಾ ಶಿಕ್ಷಕನಾಗಿ ಮತ್ತು ಬೂತ್ ಮಟ್ಟದ ಅಧಿಕಾರಿಯಾಗಿ (BLO) ಸೇವೆ ಸಲ್ಲಿಸುತ್ತಿದ್ದ ಯುವಕನೊಬ್ಬ ಮೊಗ್ರಾಲ್ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಕಾಸರಗೋಡು ಎನ್‌ಎಚ್ 66ರ ಮೊಗ್ರಾಲ್ ಕಡವತ್ ಸೇತುವೆ ಸಮೀಪದ ಬಾಳ್ ಹೌಸ್ ನಿವಾಸಿ ಬೀರನ್ ಕುಂಞಿ ಅವರ ಪುತ್ರ ಮೊಹಮ್ಮದ್ ಸಾವದ್ (31) ಎಂದು ಗುರುತಿಸಲಾಗಿದೆ. ಇವರು ಚೆರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ನಡೆದದ್ದೇನು?:
ಬೆಳಿಗ್ಗೆ ಸುಮಾರು 7 ರಿಂದ 9:30ರ ಅವಧಿಯಲ್ಲಿ ಸಾವದ್ ಅವರು ತಮ್ಮ ದ್ವಿಚಕ್ರ ವಾಹನವನ್ನು ಮೊಗ್ರಾಲ್ ಸೇತುವೆಯ ಮೇಲೆ ನಿಲ್ಲಿಸಿ ದಿಢೀರನೆ ನದಿಗೆ ಜಿಗಿದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ನದಿಗೆ ಇಳಿದು ಅವರನ್ನು ಹೊರಗೆಳೆದು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಆಸ್ಪತ್ರೆ ಮುಂದೆ ಪ್ರತಿಭಟನೆ:
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಮುಂದೆ ಜಮಾಯಿಸಿದ ಸಂಬಂಧಿಕರು ಮತ್ತು ಸಾರ್ವಜನಿಕರು ಭಾರೀ ಪ್ರತಿಭಟನೆ ನಡೆಸಿದರು. ಬಿಎಲ್ಒ (BLO) ಆಗಿ ಕೆಲಸದ ವಿಪರೀತ ಒತ್ತಡವಿದ್ದ ಕಾರಣ ಸಾವದ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಶವಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಚುನಾವಣಾ ಅಧಿಕಾರಿ ಬಿಳ್ಳು ಜೋಸೆಫ್ ಅವರು ಸಮಗ್ರ ತನಿಖೆಯ ಭರವಸೆ ನೀಡಿದ ನಂತರ ಪ್ರತಿಭಟನೆ ತಣ್ಣಗಾಯಿತು.

ತಿರುವು ನೀಡಿದ ಸೂಸೈಡ್ ನೋಟ್:
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾಗ ಸಾವದ್ ಅವರ ಮನೆಯಲ್ಲಿ ಒಂದು ಡೆತ್‌ನೋಟ್ (Suicide Note) ಪತ್ತೆಯಾಗಿದೆ. ಈ ಪತ್ರದಲ್ಲಿ ಕೇವಲ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಲಾಗಿದೆ ಹೊರತು, ಕೆಲಸದ ಒತ್ತಡದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪತ್ರದ ಸತ್ಯಾಸತ್ಯತೆ ತಿಳಿದ ನಂತರವೇ ಸಂಬಂಧಿಕರು ಶವವನ್ನು ಪಡೆದುಕೊಂಡಿದ್ದಾರೆ.

ಈಗ ಪ್ರಶ್ನೆ ಉಳಿದಿರೋದು ಆ ವೈಯಕ್ತಿಕ ಕಾರಣ ಯಾವುದು ಎಂಬುದರ ಮೇಲೆ. ಕೆಲಸದ ಒತ್ತಡದ ನಡುವೆ ಈ ಯುವ ಶಿಕ್ಷಕನನ್ನ ಕಾಡುತ್ತಿದ್ದ ಆ ನಿಗೂಢ ಸಂಕಟ ಯಾವುದು? ಕಾಸರಗೋಡು ಪೊಲೀಸರ ಮುಂದಿನ ತನಿಖೆಯಷ್ಟೇ ಈ ಸತ್ಯವನ್ನ ಹೊರಹಾಕಬೇಕಿದೆ.

error: Content is protected !!