
ಬಂಟ್ವಾಳ: ತೆಂಕುತಿಟ್ಟು ಯಕ್ಷಗಾನ ರಂಗದ ಮೇರು ಕಲಾವಿದ, ಕಲಾತಪಸ್ವಿ ಸೂರಿಕುಮೇರು ಕೆ.ಗೋವಿಂದ ಭಟ್ (86) ವಯೋಸಹಜ ಅನಾರೋಗ್ಯದಿಂದ ಶುಕ್ರವಾರ(ಮಾ.20) ರಾತ್ರಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ತಮ್ಮ ಹಿರಿಯ ಪುತ್ರನ ನಿವಾಸದಲ್ಲಿ ನಿಧನ ಹೊಂದಿದರು.
ಕೆಲವು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಅವರು ಬಳಿಕ ಶಿವಮೊಗ್ಗದಲ್ಲಿರುವ ಹಿರಿಯ ಮಗನ ಮನೆಗೆ ವಾಪಸ್ಸಾಗಿದ್ದರು.

ಕಳೆದ 50 ವರ್ಷಗಳಿಗೂ ಹೆಚ್ಚು ಕಾಲ ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸಿದ್ದರು. ಯಕ್ಷಗಾನ ಕ್ಷೇತ್ರದ ‘ನಡೆದಾಡುವ ವಿಶ್ವಕೋಶ’, ‘ದಶಾವತಾರಿ’ ಎಂದೇ ಖ್ಯಾತರಾಗಿದ್ದ ಗೋವಿಂದ ಭಟ್ ತೆಂಕುತಿಟ್ಟು ಯಕ್ಷಗಾನ ಇದುವರೆಗೆ ಕಂಡ ಸರ್ವಶ್ರೇಷ್ಠ ಕಲಾವಿದರು ಎನಿಸಿಕೊಂಡಿದ್ದರು. ಯಕ್ಷಗಾನದಲ್ಲಿ ಅನೇಕ ಶಿಷ್ಯರನ್ನು ಅವರು ಹುಟ್ಟುಹಾಕಿದ್ದಾರೆ.

1951ರಲ್ಲಿ ಬಾಲಗೋಪಾಲ ವೇಷದ ಮೂಲಕ ಧರ್ಮಸ್ಥಳ ಮೇಳದಲ್ಲಿ ಆರಂಭವಾದ ಅವರ ಕಲಾ ಪಯಣ, ಯಕ್ಷಗಾನದ ಇತಿಹಾಸದಲ್ಲಿ ದಾಖಲೆಯಾಗಿದೆ. ನೀವು ವೇಷ ಹಾಕದಿದ್ದರೂ ಪರವಾಗಿಲ್ಲ, ನಮ್ಮ ಮೇಳದ ಚೌಕಿಯಲ್ಲಿ ನೀವಿದ್ದರೆ ಸಾಕು” ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ್ದ ಗೌರವ ಅವರ ಘನತೆಗೆ ಸಾಕ್ಷಿಯಾಗಿದೆ.

ಛಂದೋಬದ್ಧವಾದ ಮಾತಿನ ಜತೆಗೆ ನೃತ್ಯದಲ್ಲೂ ಪ್ರಾವೀಣ್ಯ ಪಡೆದಿದ್ದರು. ಅವರಿಗೆ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತ್ ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಗೌರವ ಸನ್ಮಾನಗಳು ದೊರೆತಿವೆ.