ಈ ಜಗತ್ತು ಎಷ್ಟು ವಿಚಿತ್ರವಾಗಿದೆ ಅಂದರೆ, ಇಲ್ಲಿ ಸತ್ತವರು ಕೂಡ ಸಮಾಧಿಯಿಂದ ಎದ್ದು ಬಂದಿದ್ದಾರೆ ಎಂದು ನಂಬುವ ಮಂದಿ ಇದ್ದಾರೆ. ಅಮೇರಿಕಾದ ಫ್ಲೋರಿಡಾದ ಆ ಐ-95 ಹೈವೇ ಅದು ಬರಿ ವಾಹನಗಳ ಓಡಾಟಕ್ಕೆ ಮಾತ್ರವಲ್ಲ, ಇತ್ತೀಚೆಗೆ ದೊಡ್ಡದೊಂದು ದೆವ್ವದ ದರ್ಶನಕ್ಕೂ ಸಾಕ್ಷಿಯಾಯಿತು! ಬಿಳಿ ಬಣ್ಣದ ಕ್ಯಾಪ್ ಹಾಕಿ, ಕಣ್ಣಿಗೆ ಕಪ್ಪು ಕನ್ನಡಕ ಏರಿಸಿ, ಐಷಾರಾಮಿ ಕನ್ವರ್ಟಿಬಲ್ ಕಾರಿನಲ್ಲಿ ಸ್ಟೈಲ್ ಆಗಿ ಹೋಗುತ್ತಿದ್ದ ಆ ವ್ಯಕ್ತಿಯನ್ನು ಕಂಡು ಇಡೀ ಇಂಟರ್ನೆಟ್ ಜಗತ್ತು ಒಮ್ಮೆಲೇ ಬೆಚ್ಚಿಬಿತ್ತು.

ಎಪ್ಸ್ಟೀನ್ ಇನ್ನೂ ಬದುಕಿದ್ದಾನೆಯೇ?
2019ರಲ್ಲಿ ನ್ಯೂಯಾರ್ಕ್ ಜೈಲಿನಲ್ಲಿ ಹೆಣವಾಗಿದ್ದ ಸೆಕ್ಸ್ ಟ್ರಾಫಿಕಿಂಗ್ ಮಾಂತ್ರಿಕ ಜೆಫ್ರಿ ಎಪ್ಸ್ಟೀನ್ ಮತ್ತೆ ಮರಳಿ ಬಂದಿದ್ದಾನೆ ಎಂದು ಜನ ಮಾತನಾಡಿಕೊಳ್ಳಲು ಶುರುಮಾಡಿದರು. ಆಂಡ್ರ್ಯೂ ಪೋಸಿ ಎಂಬುವವನು ಅಪ್‌ಲೋಡ್ ಮಾಡಿದ ಒಂದು ಸಣ್ಣ ವಿಡಿಯೋ ಎಷ್ಟು ವೈರಲ್ ಆಯಿತು ಅಂದರೆ, ಮಿಲಿಯನ್ಗಟ್ಟಲೆ ಜನ “ನೋಡಿ, ಎಪ್ಸ್ಟೀನ್ ಫ್ಲೋರಿಡಾದಲ್ಲಿ ಅಡ್ಡಾಡುತ್ತಿದ್ದಾನೆ!” ಎಂದು ಬೊಬ್ಬೆ ಹೊಡೆದರು. ಷೇರು ಮಾರುಕಟ್ಟೆ ಕುಸಿದರೂ ಚಿಂತೆಯಿಲ್ಲ, ಆದರೆ ಸತ್ತವನು ಕಾಣಿಸಿಕೊಂಡ ಎಂದರೆ ಜನರಿಗೆ ಎಲ್ಲಿಲ್ಲದ ಕುತೂಹಲ!

ಪಾಮ್ ಬೀಚ್ ಪೀಟ್ ಎದುರು ಬಂದಾಗ…
ಆದರ ಅಸಲಿ ಕಥೆಯೇ ಬೇರೆ ಇತ್ತು. ಆ ಕಾರಿನಲ್ಲಿದ್ದಿದ್ದು ಎಪ್ಸ್ಟೀನ್ ಅಲ್ಲ, ಬದಲಾಗಿ ʻಪಾಮ್ ಬೀಚ್ ಪೀಟ್’ ಎಂದು ಕರೆಸಿಕೊಳ್ಳುವ ಒಬ್ಬ ಟೆನ್ನಿಸ್ ಆಟಗಾರ! ಹೌದು, ಪೀಟ್ ಒಬ್ಬ ಮಾಜಿ ಡಿವಿಷನ್ 1 ಟೆನ್ನಿಸ್ ಪ್ಲೇಯರ್ ಮತ್ತು ಗೋಲ್ಡ್ ಮೆಡಲಿಸ್ಟ್. ಅಂದು ಆತ ಕೇವಲ ಟೆನ್ನಿಸ್ ಆಡಲು ಹೈವೇಯಲ್ಲಿ ಹೋಗುತ್ತಿದ್ದ ಅಷ್ಟೇ. ಆದರೆ ವಿಧಿ ನೋಡಿ, ಆತನ ಮುಖದ ಚಹರೆ ಆ ಕುಖ್ಯಾತ ಎಪ್ಸ್ಟೀನ್‌ಗೆ ಹೋಲುತ್ತಿತ್ತು ಎನ್ನುವುದೇ ಆತನ ಪಾಲಿಗೆ ದೊಡ್ಡ ತಲೆನೋವಾಯಿತು.

ಪೀಟ್ ಒಂದು ಪಾಡ್‌ಕಾಸ್ಟ್ ಇಂಟರ್‌ವ್ಯೂನಲ್ಲಿ ಹೇಳಿಕೊಂಡಿರುವ ಮಾತು ಕೇಳಿದರೆ ನಿಮಗೆ ನಗು ಬರಬಹುದು. “ನನ್ನ ಫೋನ್ ಸತತವಾಗಿ ಬಾರಿಸುತ್ತಿದೆ, ಹೋದಲ್ಲೆಲ್ಲ ಜನ ನನ್ನನ್ನು ಗುರುತಿಸಿ ಸೆಲ್ಫಿ ಕೇಳ್ತಿದ್ದಾರೆ” ಎಂದು ಆತ ಗೋಳಾಡಿದ್ದಾನೆ. ರೆಸ್ಟೋರೆಂಟ್‌ಗೆ ಹೋದರೆ ಪಕ್ಕದ ಟೇಬಲ್‌ನವರು ಇವನನ್ನೇ ನೋಡ್ತಾರೆ, ಬಾರ್‌ಗೆ ಹೋದರೆ ಅಲ್ಲಿಯೂ ಫೋಟೋ ಕೇಳ್ತಾರೆ! “ನಾನು ಎಪ್ಸ್ಟೀನ್ ಅಲ್ಲಪ್ಪಾ” ಎಂದು ಆತ ಹೇಳಬೇಕಾದ ಪರಿಸ್ಥಿತಿ ಬಂದಿದೆ.

ಜೆಫ್ರಿ ಎಪ್ಸ್ಟೀನ್ 2019ರಲ್ಲೇ ಜೈಲಿನ ಕಂಬಿಗಳ ಹಿಂದೆ ತನ್ನ ಪಾಪದ ಬದುಕನ್ನು ಮುಗಿಸಿದ್ದಾನೆ. ಆದರೆ, ಆತನನ್ನು ಹೋಲುವ ಈ ಪೀಟ್ ಎಂಬ ಮುಗ್ಧ ಟೆನ್ನಿಸ್ ಆಟಗಾರ ಮಾತ್ರ ಈಗ ಜನರ ಕಣ್ಣಲ್ಲಿ ಬದುಕಿರುವ ಎಪ್ಸ್ಟೀನ್ ಆಗಿಬಿಟ್ಟಿದ್ದಾನೆ. ಈ ವೈರಲ್ ವಿಡಿಯೋಗಳ ಜಮಾನಾದಲ್ಲಿ ನಿಮ್ಮ ಮುಖ ಯಾರಿಗೆ ಹೋಲುತ್ತದೆ ಎಂದು ಒಮ್ಮೆ ಕನ್ನಡಿಯಲ್ಲಿ ನೋಡಿಟ್ಟುಕೊಳ್ಳಿ, ಇಲ್ಲದಿದ್ದರೆ ನೀವೂ ಕೂಡ ಯಾವುದೋ ಹೈವೇಯಲ್ಲಿ ಹೀಗೆ ಸುದ್ದಿಯಾಗಿಬಿಟ್ಟಿರಬಹುದು!
