ಮೂಡಬಿದ್ರೆ ಇನ್ ಸ್ಪೆಕ್ಟರ್ ಸಂದೇಶ್ ವಿರುದ್ಧದ ಸುಮತಿ ನಾಯಕ್, ಅವಿತಾ ಆರೋಪ ಸುಳ್ಳು ಮತ್ತು ಪ್ರೇರಿತ-ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ

ಮಂಗಳೂರು: ಮೂಡಬಿದ್ರೆ ಇನ್ ಸ್ಪೆಕ್ಟರ್ ಸಂದೇಶ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳದ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರು ತಿಳಿಸಿದ್ದಾರೆ.
ಈ ಕುರಿತು ನಡೆಸಲಾದ ಸಮಗ್ರ ಪ್ರಾಥಮಿಕ ತನಿಖೆಯಲ್ಲಿ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಅವರು ಮಾಡಿದ ದೂರುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಸಾಬೀತಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುಳ್ಳು ದೂರಿನ ಹಿಂದಿನ ಸಂಚು: ದೂರುದಾರರಾದ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಅವರು ನೀಡಿದ ದೂರುಗಳು ದುರುದ್ದೇಶ ಪ್ರೇರಿತವಾಗಿದ್ದು, ಅಧಿಕಾರಿಯನ್ನು ಸಿಲುಕಿಸುವ ಉದ್ದೇಶ ಹೊಂದಿದ್ದವು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪೂರಕ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಕಮೀಷನರ್ ಸ್ಪಷ್ಟಪಡಿಸಿದ್ದಾರೆ.

ಆಡಿಯೋ-ವಿಡಿಯೋ ಸತ್ಯಾಸತ್ಯತೆ:

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಮತ್ತು ವಿಡಿಯೋಗಳಲ್ಲಿರುವ ಮಹಿಳೆಯರು ಅವುಗಳು ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಅವರು ಅಧಿಕಾರಿಯ ವಿರುದ್ಧ ಯಾವುದೇ ಅಧಿಕೃತ ದೂರು ನೀಡಲು ನಿರಾಕರಿಸಿದ್ದಾರೆ. ಈ ವಿಡಿಯೋಗಳನ್ನು ವಿನೋದ್ ಪಿಂಟೋ ಮತ್ತು ಇತರರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ‌ ಎಂದು ಕಮಿಷನರ್ ಹೇಳಿದ್ದಾರೆ.

ಶಿಸ್ತುಕ್ರಮ:

“ಅಧಿಕಾರಿಯ ಮೇಲೆ ಹೊರಿಸಲಾದ ಪ್ರಸಕ್ತ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳಾಗಿದ್ದರೂ, ಆಡಿಯೋ ಮತ್ತು ವಿಡಿಯೋಗಳಲ್ಲಿ ಕಂಡುಬಂದಿರುವ ಅವರ ನೈಜ ದುರ್ನಡತೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಯ ಹಳೆಯ ತಪ್ಪುಗಳ ಹಿನ್ನೆಲೆಯಲ್ಲಿ ಈಗಾಗಲೇ ಶಿಸ್ತುಕ್ರಮ ಕೈಗೊಳ್ಳಲಾಗಿದೆ,” ಎಂದು ಕಮಿಷನರ್ ತಿಳಿಸಿದರು.

ಕಮೀಷನರ್ ಎಚ್ಚರಿಕೆ!

ಠಾಣೆಗೆ ಬರುವ ಮಹಿಳೆಯರ ರಕ್ಷಣೆ ಮತ್ತು ಅವರೊಂದಿಗೆ ಗೌರವಯುತವಾಗಿ ವರ್ತಿಸುವುದು ಪೊಲೀಸರ ಆದ್ಯ ಕರ್ತವ್ಯ. ಈ ಘಟನೆಯಿಂದ ಇಡೀ ಇಲಾಖೆಗೆ ಪಾಠವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ವರ್ತನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು. ಅದೇ ವೇಳೆ, ವೈಯಕ್ತಿಕ ದ್ವೇಷಕ್ಕಾಗಿ ಸುಳ್ಳು ದೂರುಗಳನ್ನು ನೀಡಿ ತನಿಖೆಯ ಹಾದಿ ತಪ್ಪಿಸುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ಎಚ್ಚರಿಸಿದ್ದಾರೆ

error: Content is protected !!