ಜಂಬದ ಕೋಳಿಗಳಂತೆ ಕಾದಾಡಿದ ಇಸ್ರೇಲ್-ಇರಾನ್: ಹಲವು ತೈಲ ನೆಲೆಗಳು ಉಡೀಸ್

ತೆಲ್ ಅವಿವ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಇಸ್ರೇಲ್ ಮತ್ತು ಇರಾನ್ ಪರಸ್ಪರ ವಾಯುನೆಲೆ ಹಾಗೂ ಇಂಧನ ಘಟಕಗಳ ಮೇಲೆ ಇಂದು ಕೂಡ ಭೀಕರ ದಾಳಿ ನಡೆಸಿವೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಮನೆಮಾಡಿದೆ.

ಇರಾನ್‌ನ ತೈಲ ಸಂಸ್ಕರಣಾ ಘಟಕಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ, ಪ್ರತಿಕಾರವಾಗಿ ಇರಾನ್ ಇಸ್ರೇಲ್‌ನ ತೆಲ್ ಅವಿವ್ ನಗರವನ್ನು ಗುರಿಯಾಗಿಸಿ ನೂರಾರು ಕ್ಷಿಪಣಿಗಳನ್ನು ಉಡಾಯಿಸಿದೆ. ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಯು ಅನೇಕ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಕತಾರ್ ಮತ್ತು ಇರಾನ್ ಹಂಚಿಕೊಂಡಿರುವ ಅನಿಲ ಕ್ಷೇತ್ರಗಳ ಮೇಲೆ ನಡೆದ ದಾಳಿಯಿಂದಾಗಿ ಅಪಾರ ಹಾನಿಯಾಗಿದೆ. ಕತಾರ್‌ನ ಎಲ್‌ಎನ್‌ಜಿ (LNG) ರಫ್ತು ಸಾಮರ್ಥ್ಯದ ಆರನೇ ಒಂದು ಭಾಗದಷ್ಟು ಕುಸಿತ ಕಂಡಿದ್ದು, ಇದರ ದುರಸ್ತಿಗೆ 3 ರಿಂದ 5 ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಯುಎಇ ಮತ್ತು ಕುವೈತ್ ಕೂಡ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಭೀತಿಯನ್ನು ವರದಿ ಮಾಡಿವೆ. ಸೌದಿ ಅರೇಬಿಯಾದ ಪ್ರಮುಖ ಬಂದರಿನ ಮೇಲೂ ದಾಳಿ ನಡೆದಿದ್ದು, ಕೆಂಪು ಸಮುದ್ರದ ಮೂಲಕ ನಡೆಯುವ ಹಡಗು ಸಂಚಾರಕ್ಕೆ ಅಡ್ಡಿಯಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ ಇಂಧನ ಮೂಲಸೌಕರ್ಯಗಳ ಮೇಲೆ ಮತ್ತೆ ದಾಳಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ತೈಲ ಬೆಲೆ ಏರಿಕೆಯು ಅಮೆರಿಕದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮದ ಬಗ್ಗೆ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ. ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ಸೇರಿದಂತೆ ಪ್ರಮುಖ ರಾಷ್ಟ್ರಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಸಹಕರಿಸುವುದಾಗಿ ತಿಳಿಸಿವೆ. ಆದರೆ, ಯುದ್ಧದಲ್ಲಿ ನೇರವಾಗಿ ಭಾಗಿಯಾಗಲು ಯುರೋಪಿಯನ್ ರಾಷ್ಟ್ರಗಳು ಹಿಂದೇಟು ಹಾಕುತ್ತಿವೆ.

ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ವಿಶ್ವದ ತೈಲ ಸರಬರಾಜಿನ ಶೇ. 20ರಷ್ಟು ಪಾಲನ್ನು ಹೊಂದಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದರೆ, ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ.

ಇರಾನ್ ತನ್ನ ಕ್ಷಿಪಣಿ ಉತ್ಪಾದನೆಯನ್ನು ಮುಂದುವರಿಸುವುದಾಗಿ ಘೋಷಿಸಿದ್ದು, ದಾಳಿ ಮುಂದುವರಿದರೆ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಇಂಧನ ಘಟಕಗಳನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ ಎಚ್ಚರಿಕೆ ನೀಡಿದೆ.

error: Content is protected !!