ಬರಿದಾದ ಸಿಲಿಂಡರ್, ಆರಿಹೋದ ಒಲೆ: ವಿದ್ಯಾರ್ಥಿಗಳಿಗೆ ಅವಲಕ್ಕಿಯೇ ಗತಿ; ಹೋಟೆಲ್ ಉದ್ಯಮಕ್ಕೆ ಬೀಗ, ಬೀದಿಗೆ ಬಂತು ಬಡವನ ಬದುಕು!

ಮಂಗಳೂರು: ಅತ್ತ ಇರಾನ್‌ನ ಮರಳುಗಾಡಿನಲ್ಲಿ ಕ್ಷಿಪಣಿಗಳು ಆರ್ಭಟಿಸುತ್ತಿವೆ, ಹಾರ್ಮುಜ್ ಜಲಸಂಧಿಯಲ್ಲಿ ಯುದ್ಧ ನೌಕೆಗಳು ಅಲೆದಾಡುತ್ತಿವೆ. ಆದರೆ ಅದರ ಅತ್ಯಂತ ಕ್ರೂರವಾದ ಬಿಸಿ ತಟ್ಟಿದ್ದು ಎಲ್ಲಿ ಗೊತ್ತೇ? ಮಂಗಳೂರಿನಂಥ ನಗರಗಳಲ್ಲಿ ಪುಟ್ಟ ಗೂಡಂಗಡಿಗೆ, ಮುಲ್ಕಿಯ ಲಿಂಗಪ್ಪಯ್ಯ ಕಾಡಿನಂಥ ಗಲ್ಲಿಗಳಲ್ಲಿ ಬಡವರ ಕ್ಯಾಂಟೀನ್‌ಗೆ ಮತ್ತು ಪಿಜಿಗಳಲ್ಲಿ ಕೈ ಅಡುಗೆಗೆ ಕಾಯುತ್ತಿದ್ದ ವಿದ್ಯಾರ್ಥಿಯ ತಟ್ಟೆಗೆ! ಎಲ್ಲಿಯೋ ನಡೆದ ಯುದ್ಧಕ್ಕೆ ಇಲ್ಲಿನ ಸಾಮಾನ್ಯ ಜನರ ಬದುಕೇ ಈಗ ಅಕ್ಷರಶಃ ಬೂದಿಯಾಗುತ್ತಿದೆ.

ಬಾಗಿಲು ಹಾಕಿದ ಹೋಟೆಲ್‌ಗಳು; ಅವಲಕ್ಕಿಯೇ ವಿದ್ಯಾರ್ಥಿಗಳ ಗತಿ!
ಮಂಗಳೂರು ನಗರದ ಗಲ್ಲಿ ಗಲ್ಲಿಯ ಗೂಡಂಗಡಿಗಳು, ಮುಲ್ಕಿ ಮತ್ತು ಲಿಂಗಪ್ಪಯ್ಯ ಕಾಡು ಆಸುಪಾಸಿನ ಕ್ಯಾಂಟೀನ್‌ಗಳು ಇಂದು ಸ್ಮಶಾನಮೌನ ತಾಳಿವೆ. ಮೂಡಬಿದ್ರೆ ಭಾಗದ ಸುಮಾರು ಶೇ.70ರಷ್ಟು ಹೋಟೆಲ್‌ಗಳು ಗ್ಯಾಸ್ ಇಲ್ಲದೆ ಬಾಗಿಲು ಹಾಕಿಕೊಂಡಿವೆ. ಕೊಕ್ಕಡ, ಕಡಬದ ಹೆದ್ದಾರಿ ಬದಿಯಲ್ಲಿ ರುಚಿ ರುಚಿ ಆಹಾರ ನೀಡುತ್ತಿದ್ದ ಮಲೆನಾಡು ಶೈಲಿಯ ಹೋಟೆಲ್‌ಗಳಿಗೆ ಇಂದು ಬೀಗ ಬಿದ್ದಿದೆ. ಇದರ ನೇರ ಪರಿಣಾಮ ಬಿಟ್ಟಿದ್ದು ಪಿಜಿ (PG) ವಿದ್ಯಾರ್ಥಿಗಳ ಮೇಲೆ. ಅನ್ನ, ಚಪಾತಿಯಂತಹ ಪೌಷ್ಟಿಕ ಆಹಾರಗಳು ಮೆನುವಿನಿಂದ ಮಾಯವಾಗಿವೆ, ಹೊಟ್ಟೆ ಹಸಿವಿನಿಂದ ಕಂಗೆಟ್ಟಿರುವ ವಿದ್ಯಾರ್ಥಿಗಳಿಗೆ ಈಗ ಒಣಗಿದ ಅವಲಕ್ಕಿಯೊಂದೇ ಜೀವನಾಧಾರ!

ಸಾಲದ ಸುಳಿಯಲ್ಲಿ ಬಡ ಉದ್ಯಮಿ 
ಇದು ಬರೀ ಹೋಟೆಲ್ ಬಂದ್ ಆಗಿರುವ ಸುದ್ದಿಯಲ್ಲ, ಇದರ ಹಿಂದೆ ನೂರಾರು ಕುಟುಂಬಗಳ ಹಸಿವಿನ ಕಣ್ಣೀರಿದೆ. ಮಕ್ಕಳ ಸ್ಕೂಲ್ ಫೀಸ್ ಕಟ್ಟಲು, ಮನೆ ಖರ್ಚಿಗೆ ಹಣ ಹೊಂದಿಸಲು ಹೋಟೆಲ್ ನಂಬಿಕೊಂಡಿದ್ದವರು ಇಂದು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಲಕ್ಷಾಂತರ ರೂಪಾಯಿ ಲೋನ್ ಮಾಡಿ ಕ್ಯಾಂಟೀನ್ ತೆರೆದವರು ತಿಂಗಳ ಇಎಂಐ (EMI) ಕಟ್ಟಲಾಗದೆ, ಜೀವನವೇ ಬೇಡವೆನ್ನುವ ಸ್ಥಿತಿಗೆ ತಲುಪಿದ್ದಾರೆ. ಇತ್ತ ಸಣ್ಣ ಹೋಟೆಲ್‌ಗಳು ಮುಚ್ಚುತ್ತಿದ್ದರೆ, ಅತ್ತ ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳೂ ಕೂಡ ವ್ಯವಹಾರ ನಡೆಸಲು ಸಾಧ್ಯವಾಗದೆ ಭೀತಿಯಲ್ಲಿ ಕಾಲ ಕಳೆಯುತ್ತಿವೆ.

ಗ್ಯಾಸ್ ಬದಲು ಸೌದೆ: ಮರಗಳ ಬುಡಕ್ಕೆ ಕೊಡಲಿ ಏಟು!
ಗ್ಯಾಸ್ ಇಲ್ಲದ ಕಾರಣ ದೇವಸ್ಥಾನಗಳಲ್ಲೂ ಈಗ ಅನಿವಾರ್ಯವಾಗಿ ಸೌದೆ ಒಲೆಗಳನ್ನು ಹಚ್ಚಲಾಗುತ್ತಿದೆ. ವಿಪರ್ಯಾಸವೆಂದರೆ, ಗ್ಯಾಸ್‌ಗಿಂತಲೂ ಈಗ ಸೌದೆಗೆ ಬೇಡಿಕೆ ಹೆಚ್ಚಾಗಿದ್ದು, ಅದರ ದರವೂ ದುಪ್ಪಟ್ಟಾಗಿದೆ. ಸೌದೆಗಾಗಿ ಕಾಡುಗಳ ಮೇಲೆ ಕಣ್ಣು ಬಿದ್ದಿದ್ದು, ಹಸಿರು ಮರಗಳ ಬುಡಕ್ಕೆ ಕೊಡಲಿ ಏಟು ಬೀಳುವ ಪರಿಸರ ವಿನಾಶದ ಭೀತಿ ಎದುರಾಗಿದೆ. ಬೆಲೆ ಏರಿಕೆಯ ಸುಳಿಗೆ ಸಿಲುಕಿ ತಿಂಡಿ ತಿನಿಸುಗಳ ರೇಟ್ ಈಗ ಡಬಲ್ ಆಗಿದೆ. ಬಡವ ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ?

ಮೀನುಗಾರರ ಸಂಕಷ್ಟ: ಆಳ ಸಮುದ್ರದ ಅಡುಗೆಗೆ ಅನಿಲದ ಬರ!
ಈಗಾಗಲೇ ಮೀನಿನ ಕೊರತೆಯಿಂದ ಕಂಗಾಲಾಗಿದ್ದ ಮೀನುಗಾರರಿಗೆ ಈಗ ಗ್ಯಾಸ್ ಅಭಾವ ಹೊಸ ಶಾಪವಾಗಿ ಪರಿಣಮಿಸಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್‌ಗಳಲ್ಲಿ ಅಡುಗೆ ಮಾಡಲು ಗ್ಯಾಸ್ ಒಲೆಗಳೇ ಅನಿವಾರ್ಯ. ಆದರೆ ಅನಿಲ ಸಿಗದೆ ಹಲವು ಬೋಟ್‌ಗಳು ದಕ್ಕೆಯಲ್ಲೇ ಉಳಿದುಕೊಂಡಿವೆ. ಅನಿವಾರ್ಯವಾಗಿ ಸೀಮೆಎಣ್ಣೆ ಸ್ಟೌವ್‌ಗಳ ಮೊರೆ ಹೋಗಿದ್ದರೂ, ಅದರ ಬೆಲೆಯೂ ಈಗ ದುಪ್ಪಟ್ಟಾಗಿದೆ. ಸಮುದ್ರದ ಮಧ್ಯೆ ಸೀಮೆಎಣ್ಣೆ ಒಲೆ ಬಳಸುವುದು ಅಪಾಯಕಾರಿ ಮತ್ತು ದುಬಾರಿ ಎಂಬುದು ಮೀನುಗಾರರ ಅಳಲು.

ರಫ್ತು ನಂಬಿದ ಮೀನುಗಾರಿಕೆಗೆ ‘ಯುದ್ಧ’ದ ಬರೆ!
ನಮ್ಮ ಕರಾವಳಿಯ ಹೆಮ್ಮೆಯ ಸಿಗಡಿ (Prawns), ಅಂಜಲ್ (King Fish), ಮಾಂಜಿ (Pomfret) ಮತ್ತು ಬೊಂಡಾಸ್ (Squid) ಮೀನುಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆಯಿದೆ. ಈ ಹಿಂದೆ ಇಲ್ಲಿಂದ ಟನ್‌ಗಟ್ಟಲೆ ಮೀನುಗಳು ವಿದೇಶಕ್ಕೆ ರಫ್ತಾಗುತ್ತಿದ್ದವು. ಆದರೆ ಈಗ ಕಂಟೇನರ್ ಹಡಗುಗಳ ಸಂಚಾರಕ್ಕೆ ನಿರ್ಬಂಧ ಬಿದ್ದಿರುವುದರಿಂದ, ರಫ್ತು ಉದ್ಯಮ ನೆಲಕಚ್ಚಿದೆ. ಹಿಡಿದ ಮೀನುಗಳನ್ನು ಮಾರಲಾಗದೆ, ಅತ್ತ ರಫ್ತು ಮಾಡಲಾಗದೆ ಮೀನುಗಾರರು ದಿಕ್ಕು ತೋಚದಂತಾಗಿದ್ದಾರೆ. ಅಂತರಾಷ್ಟ್ರೀಯ ಬಿಕ್ಕಟ್ಟು ಕರಾವಳಿಯ ಮೀನುಗಾರನ ಬಲೆಯನ್ನು ಹರಿದು ಹಾಕಿದೆ.

ತುರ್ತು ವಲಯಗಳಿಗೆ ಆದ್ಯತೆ ನೀಡಿ:
ಈ ಗ್ಯಾಸ್ ಅಭಾವದ ಬಿಕ್ಕಟ್ಟಿನ ನಡುವೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕಿದೆ. ಗೃಹ ಬಳಕೆ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಹಾಸ್ಟೆಲ್‌ಗಳು, ವಸತಿ ನಿಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳಂತಹ ಅತ್ಯಂತ ತುರ್ತು ವಲಯಗಳಿಗೆ ಮೊದಲ ಆದ್ಯತೆಯ ಮೇಲೆ ಗ್ಯಾಸ್ ಪೂರೈಸಬೇಕೆಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ.

ಕೃತಕ ಅಭಾವದ ವಾಸನೆ
“ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ” ಎಂಬಂತೆ ಇರಾನ್‌ನಲ್ಲಿ ಯುದ್ಧ ನಡೆದ ಕೇವಲ ಒಂದು ವಾರದಲ್ಲೇ ಭಾರತದಲ್ಲಿ ಗ್ಯಾಸ್‌ಗೆ ಬರ ಬಂದಿದ್ದು ಹೇಗೆ? ಇದು ಕೃತಕ ಅಭಾವ ಸೃಷ್ಟಿಸಿ ಕಾಳದಂಧೆ ನಡೆಸುವ ಬೃಹತ್ ಪ್ಲಾನ್ ಆಗಿದೆಯೇ? ಎಂಬ ಸಂಶಯ ಈಗ ಜಗಜ್ಜಾಹೀರಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳಿಗೆ ಸಂಚರಿಸಲು ಪರ್ಮಿಷನ್ ಇದ್ದರೂ ಗ್ಯಾಸ್ ಪೂರೈಕೆ ಯಾಕೆ ನಿಂತಿದೆ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಜವಾಬ್ದಾರಿ ಯಾರು ಹೊರತ್ತಾರೆ?
ಈ ಗ್ಯಾಸ್ ಬಿಕ್ಕಟ್ಟು ಕೇವಲ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕಷ್ಟೇ ಸೀಮಿತವಾಗಿಲ್ಲ, ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಮತ್ತು ನಾಗಪುರಕ್ಕೂ ತಟ್ಟಿದೆ. ದೇಶಾದ್ಯಂತ ವ್ಯಾಪಿಸಿರುವ ಈ ಬೃಹತ್ ಬಿಕ್ಕಟ್ಟಿನ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳುವವರು ಯಾರು? ಅಧಿಕಾರದ ಕುರ್ಚಿಯಲ್ಲಿ ಕುಳಿತವರು ಯಾಕೆ ಮೌನವಾಗಿದ್ದಾರೆ? ಯುದ್ಧದ ನೆಪವೊಡ್ಡಿ ಜನಸಾಮಾನ್ಯರ ತಟ್ಟೆಯನ್ನು ಖಾಲಿ ಮಾಡುತ್ತಿರುವ ಈ ವ್ಯವಸ್ಥೆಯ ವಿರುದ್ಧ ಈಗ ಜನತೆ ಆಕ್ರೋಶದ ಜ್ವಾಲೆಯಾಗುತ್ತಿದ್ದಾರೆ.

error: Content is protected !!