ಮಂಗಳೂರು: “ನಗರದ ರಸ್ತೆಬದಿಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹಳೆಯ ದೇವರ ಫೋಟೋ ಹಾಗೂ ವಿಗ್ರಹಗಳನ್ನು ಎಸೆಯುವುದು ಕೇವಲ ಸ್ವಚ್ಛತೆಯ ಸಮಸ್ಯೆಯಲ್ಲ, ಅದು ನಮ್ಮ ಸಾಂಸ್ಕೃತಿಕ ಸಂವೇದನೆಯ ಪ್ರಶ್ನೆಯೂ ಹೌದು. ಈ ನಿಟ್ಟಿನಲ್ಲಿ ಧಾರ್ಮಿಕ ತ್ಯಾಜ್ಯಗಳನ್ನು ಗೌರವಪೂರ್ವಕವಾಗಿ ವಿಲೇವಾರಿ ಮಾಡಲು ನಾವು ‘ವಿಸರ್ಜನೆ’ ಅಭಿಯಾನ ಹಮ್ಮಿಕೊಂಡಿದ್ದೇವೆ” ಎಂದು ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮನಂದಜೀ ಹೇಳಿದರು.

ನಗರದ ಮಂಗಳಾದೇವಿ ಆಶ್ರಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2015 ರಿಂದ ನಿರಂತರವಾಗಿ ನಡೆಯುತ್ತಿರುವ ‘ಸ್ವಚ್ಛ ಮಂಗಳೂರು’ ಅಭಿಯಾನದ ಮುಂದಿನ ಹಂತವಾಗಿ ಈ ವಿಶೇಷ ಯೋಜನೆಯನ್ನು ಘೋಷಿಸಿದರು.
ಎಲ್ಲೆಂದರಲ್ಲಿ ಎಸೆಯಬೇಡಿ, ನಮಗೆ ತಲುಪಿಸಿ:
“ಇತ್ತೀಚೆಗೆ ಕದ್ರಿ ದೇವಸ್ಥಾನದ ಪರಿಸರದಲ್ಲಿ ಶ್ರಮದಾನ ಮಾಡುವಾಗ, ಜನರು ಹಳೆಯ ಪೂಜಾ ಸಾಮಗ್ರಿಗಳನ್ನು ಮತ್ತು ದೇವರ ಫೋಟೋಗಳನ್ನು ಮರದ ಕೆಳಗೆ ಅಥವಾ ರಸ್ತೆ ಬದಿಯಲ್ಲಿ ವಿವೇಚನೆಯಿಲ್ಲದೆ ಎಸೆದಿರುವುದು ಕಂಡುಬಂದಿದೆ. ಇದು ನಮಗೂ ಮತ್ತು ಭಕ್ತರಿಗೂ ನೋವುಂಟು ಮಾಡುವ ಸಂಗತಿ. ಇದನ್ನು ಸರಿಪಡಿಸಲು ನಾವು ಇದೇ ಮಾರ್ಚ್ 16 ರಿಂದ 26ರವರೆಗೆ ನಗರದ ಆರು ಪ್ರಮುಖ ಸ್ಥಳಗಳಲ್ಲಿ ಸಂಗ್ರಹ ಕೇಂದ್ರಗಳನ್ನು ತೆರೆದಿದ್ದೇವೆ. ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ದೇವರ ಚಿತ್ರಗಳು, ಮುರಿದ ಮೂರ್ತಿಗಳು ಹಾಗೂ ಧಾರ್ಮಿಕ ಕ್ಯಾಲೆಂಡರ್‌ಗಳನ್ನು ಅಲ್ಲಿರುವ ಹುಂಡಿಗಳಿಗೆ ಸಲ್ಲಿಸಬಹುದು” ಎಂದು ಅವರು ವಿನಂತಿಸಿದರು.

ಸಂಗ್ರಹ ಕೇಂದ್ರಗಳು ಮತ್ತು ವಿಲೇವಾರಿ ಕ್ರಮ:
ಮಂಗಳಾದೇವಿ ಮತ್ತು ಕದ್ರಿ ದೇವಸ್ಥಾನಗಳು, ಬಿಜೈ ಭಾರತ್ ಮಾಲ್, ಪಾಂಡೇಶ್ವರ ಫೋರಂ ಮಾಲ್, ಸಿಟಿ ಸೆಂಟರ್ ಮಾಲ್ ಹಾಗೂ ಸುರತ್ಕಲ್‌ನ ಗೋವಿಂದ ದಾಸ ಕಾಲೇಜುಗಳಲ್ಲಿ ಈ ಸೌಲಭ್ಯವಿರುತ್ತದೆ. ಸಂಗ್ರಹವಾದ ವಸ್ತುಗಳನ್ನು ವೈಜ್ಞಾನಿಕವಾಗಿ ಮತ್ತು ಶಾಸ್ತ್ರೋಕ್ತವಾಗಿ ವಿಲೇವಾರಿ ಮಾಡಲಾಗುವುದು. ಕದ್ರಿ ದೇವಸ್ಥಾನದ ಅರ್ಚಕರಿಂದ ‘ಉದ್ವಾಸನ ಪೂಜೆ’ ನೆರವೇರಿಸಿ, ಪೇಪರ್ ಚಿತ್ರಗಳನ್ನು ನಿಮಜ್ಜನ ಮಾಡಿ ಭೂಮಿಯಲ್ಲಿ ಹೂಳಲಾಗುವುದು. ಗಾಜು, ಲೋಹದಂತಹ ವಸ್ತುಗಳನ್ನು ಮರುಬಳಕೆಗೆ ಕಳುಹಿಸಲಾಗುವುದು ಎಂದು ವಿವರಿಸಿದರು.

“ಈ ಅಭಿಯಾನವು ಕೇವಲ ಕಸ ವಿಲೇವಾರಿಯಲ್ಲ, ಬದಲಾಗಿ ನಮ್ಮ ಧಾರ್ಮಿಕ ನಂಬಿಕೆಗಳನ್ನು ಪರಿಸರ ಸ್ನೇಹಿಯಾಗಿ ಹೇಗೆ ನಿಭಾಯಿಸಬೇಕು ಎಂಬ ಜಾಗೃತಿ ಮೂಡಿಸುವ ಪ್ರಯತ್ನವೂ ಆಗಿದೆ” ಎಂದು ಸ್ವಾಮಿಗಳು ತಿಳಿಸಿದರು. ಉದಯ ಕೆ.ಪಿ. ಮತ್ತು ತಾರಾನಾಥ ಆಳ್ವ ಈ ಯೋಜನೆಯ ನೇತೃತ್ವ ವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಹಕಾರ್ಯದರ್ಶಿಗಳಾದ ಚಿದಂಬರಾನಂದ ಹಾಗೂ ಸಂಯೋಜಕರಾದ ರಂಜನ್ ಬೆಳ್ಳಂಪಾಡಿ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 8105356290 ಅನ್ನು ಸಂಪರ್ಕಿಸಲು ಕೋರಲಾಗಿದೆ.
