ಸುರತ್ಕಲ್: ಕರಾವಳಿಯ ಆರಾಧ್ಯ ದೈವಗಳಾದ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳರ ಸನ್ನಿಧಿಯಾದ ಸುರತ್ಕಲ್‌ನ ಕೊಡಿಪಾಡಿ ಬ್ರಹ್ಮಸ್ಥಾನ ಗರೋಡಿಯಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಜರುಗುತ್ತಿವೆ. ಹಸಿರು ತೋರಣಗಳಿಂದ ಸಿಂಗಾರಗೊಂಡಿರುವ ಗರೋಡಿಯ ಆವರಣದಲ್ಲಿ ಭಕ್ತಾದಿಗಳ ಜಯಘೋಷ ಮೊಳಗುತ್ತಿದ್ದು, ಧಾರ್ಮಿಕ ವಿಧಿವಿಧಾನಗಳು ಭಕ್ತಿಪೂರ್ವಕವಾಗಿ ನೆರವೇರುತ್ತಿವೆ. ಏಪ್ರಿಲ್ 28 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಮೇ 3 ರ ತನಕ ವಿಜ್ರಂಭಣೆಯಿಂದ ಬ್ರಹ್ಮಕಲಶೋತ್ಸವದ ವಿಧಿವಿಧಾನಗಳು ಜರುತ್ತಿದೆ.










ಕೊಡಿಪಾಡಿ ಬ್ರಹ್ಮಸ್ಥಾನದ ಪುಣ್ಯಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮದ ನಡುವೆ ನಡೆದ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳರ ನೇಮೋತ್ಸವವು ಭಕ್ತರ ಪಾಲಿಗೆ ಕಣ್ಣಿಗೊಂದು ಹಬ್ಬವಾಗಿತ್ತು. ದೈವದ ಪಾತ್ರಿಗಳು ಸಾಂಪ್ರದಾಯಿಕವಾದ ಅಣಿ, ಸಿರಿಮುಡಿ ಮತ್ತು ಆಭರಣಗಳನ್ನು ಧರಿಸಿ ಭವ್ಯವಾಗಿ ಕಂಗೊಳಿಸುತ್ತಿದ್ದರು. ಕೊಡಮಣಿತ್ತಾಯ ದೈವದ ರೌದ್ರಾವತಾರದ ನರ್ತನ ಮತ್ತು ಬ್ರಹ್ಮ ಬೈದರ್ಕಳರ ಗಾಂಭೀರ್ಯದ ಹೆಜ್ಜೆಗಳು ನೆರೆದಿದ್ದ ಸಾವಿರಾರು ಭಕ್ತರಲ್ಲಿ ರೋಮಾಂಚನ ಉಂಟುಮಾಡಿದವು.
ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಹೋಮ-ಹವನಗಳು, ಪ್ರಾರ್ಥನೆಗಳು ನಡೆಯುತ್ತಿವೆ. ದೈವಗಳ ಬಿಂಬಕ್ಕೆ ಶುದ್ಧೀಕರಣ ಹಾಗೂ ಪುಣ್ಯಾಹವಾಚನದಂತಹ ಶಾಸ್ತ್ರೋಕ್ತ ವಿಧಿಗಳನ್ನು ನೆರವೇರಿಸುವ ಮೂಲಕ ದೈವ ಸನ್ನಿಧಿಯಲ್ಲಿ ಚೈತನ್ಯ ತುಂಬುವ ಕಾರ್ಯ ನಡೆಯುತ್ತಿದೆ. ಭಕ್ತರು ಸರದಿಯ ಸಾಲಿನಲ್ಲಿ ನಿಂತು ದೈವಗಳ ದರ್ಶನ ಪಡೆಯುತ್ತಿದ್ದು, ಇಡೀ ಪರಿಸರದಲ್ಲಿ ದೈವೀ ಕಳೆ ತುಂಬಿ ತುಳುಕುತ್ತಿದೆ.
ಕಾರ್ಯಕ್ರಮದ ಭಾಗವಾಗಿ ನಡೆದ ಭವ್ಯ ಹೊರೆಕಾಣಿಕೆ ಮೆರವಣಿಗೆಯು ಎಲ್ಲರ ಗಮನ ಸೆಳೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಿಯಿಂದ ತಂದ ತರಕಾರಿ, ಧಾನ್ಯಗಳ ಹೊರೆಕಾಣಿಕೆಯು ಕ್ಷೇತ್ರದ ಮೇಲಿರುವ ಜನಸಾಮಾನ್ಯರ ಅಪಾರ ಶ್ರದ್ಧೆಯನ್ನು ಸಾಬೀತುಪಡಿಸಿತು. ಚಂಡೆ-ವಾದನಗಳ ಸದ್ದು, ಭಜನಾ ಸಂಘಗಳ ಗಾಯನವು ಕಾರ್ಯಕ್ರಮದ ಕಳೆಯನ್ನು ಇನ್ನಷ್ಟು ಹೆಚ್ಚಿಸಿತು.
ಗರೋಡಿಯ ಸಮಿತಿ ಮತ್ತು ನೂರಾರು ಸ್ವಯಂಸೇವಕರು ಶಿಸ್ತುಬದ್ಧವಾಗಿ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದಾರೆ. ದೂರದೂರುಗಳಿಂದ ಬರುವ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಕರಾವಳಿಯ ಸಂಸ್ಕೃತಿಯ ಪ್ರತಿಬಿಂಬದಂತಿರುವ ಈ ಬ್ರಹ್ಮಕಲಶೋತ್ಸವವು ಗ್ರಾಮದ ಏಕತೆ ಮತ್ತು ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಕೊಡಿಪಾಡಿ ಬ್ರಹ್ಮಸ್ಥಾನದ ಈ ಪವಿತ್ರ ಕಾರ್ಯಕ್ರಮವು ಸಮಾಜದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.