ಫರಂಗಿಪೇಟೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಅರ್ಕುಳ ದ್ವಾರದ ಸಮೀಪ ಇಂದು ಮಧ್ಯಾಹ್ನ ಸರಕು ಸಾಗಾಟದ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.




ಅರ್ಕುಳ ದ್ವಾರದ ಬಳಿ ಸ್ಕೂಟರ್ ಸವಾರ ಬಲಭಾಗಕ್ಕೆ ತಿರುಗಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ, ವಿರುದ್ಧ ದಿಕ್ಕಿನಿಂದ ಲಾರಿಯು ಸ್ಕೂಟರ್‌ಗೆ ನೇರವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಲಾರಿಯ ಚಕ್ರದಡಿಗೆ ಸಿಲುಕಿದ್ದು, ಸ್ಕೂಟರ್ ಚಾಲಕನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅದೃಷ್ಟವಶಾತ್, ಸ್ಕೂಟರ್‌ನ ಹಿಂಬದಿ ಸವಾರ ಅಪಘಾತವಾಗುತ್ತಿದ್ದಂತೆಯೇ ಜಿಗಿದು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾನವೀಯತೆ ಮೆರೆದ ಸಾರ್ವಜನಿಕರು ಹಾಗೂ ರಿಕ್ಷಾ ಚಾಲಕ:
ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿದ್ದ ಇತರ ವಾಹನ ಸವಾರರು ಹಾಗೂ ಸಾರ್ವಜನಿಕರು ಧಾವಿಸಿ ಬಂದು ಗಾಯಾಳುವನ್ನು ರಕ್ಷಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸವಾರನನ್ನು ಕಂಡು ಎಲ್ಲರೂ ಆತಂಕಕ್ಕೊಳಗಾಗಿದ್ದಾಗ, ಸ್ಥಳೀಯ ರಿಕ್ಷಾ ಚಾಲಕರೊಬ್ಬರು ಆಪತ್ಬಾಂಧವನಂತೆ ಧಾವಿಸಿ ಬಂದಿದ್ದಾರೆ. ಯಾವುದೇ ವಿಳಂಬ ಮಾಡದೆ ತನ್ನ ರಿಕ್ಷಾದಲ್ಲಿಯೇ ಗಾಯಾಳುವನ್ನು ಕುಳ್ಳಿರಿಸಿಕೊಂಡು ಕೂಡಲೇ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಗಾಯಗೊಂಡ ವ್ಯಕ್ತಿಯು ಸ್ಥಳೀಯ ಮರಳು ಕಾರ್ಮಿಕ ಎಂದು ಗುರುತಿಸಲಾಗಿದೆ. ಮರಳಿನ ದೋಣಿಗಳಿಗೆ ಬೇಕಾದ ಬೋಲ್ಟ್ ಸೇರಿದಂತೆ ಇತರ ತಾಂತ್ರಿಕ ಸಾಮಗ್ರಿಗಳನ್ನು ಸ್ಕೂಟರ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಗಾಯಾಳುವನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.