ಕಾಸರಗೋಡು: ವೆಳ್ಳರಿಕುಂಡು ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕ ಸಿ. ರಾಜು (39) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸ್ ಇಲಾಖೆಯ ಗಸ್ತು ವಾಹನ ಮತ್ತು ಆಟೋ ರಿಕ್ಷಾ ನಡುವೆ ನಡೆದ ಈ ಮುಖಾಮುಖಿ ಢಿಕ್ಕಿಯಲ್ಲಿ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸಾರ್ವಜನಿಕರು ಹರಸಾಹಸ ಪಟ್ಟು ಮೃತದೇಹವನ್ನು ಹೊರತೆಗೆದಿದ್ದಾರೆ.

ವೆಳ್ಳರಿಕುಂಡು ಪೊಲೀಸ್ ಠಾಣೆಗೆ ಹೊಸದಾಗಿ ಸೇರ್ಪಡೆಗೊಂಡಿದ್ದ ʻಫೋರ್ಸ್ ಗೂರ್ಖಾ’ ವಾಹನವು ಪರಪ್ಪ ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಪೊಲೀಸ್ ವಾಹನದಲ್ಲಿ ಒಬ್ಬರು ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಸಿಬ್ಬಂದಿಗಳಿದ್ದರು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾದ ಮುಂಭಾಗ ಸಂಪೂರ್ಣವಾಗಿ ಜಜ್ಜಲ್ಪಟ್ಟಿದ್ದು, ಚಾಲಕ ರಾಜು ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಲ್ಲಿ ಜೀಪಿನಲ್ಲಿದ್ದ ಮಹಿಳಾ ಎಎಸ್‌ಐ ಕೌಸಲ್ಯ ಅವರಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಕುರಿತು ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ರಿಕ್ಷಾ ತಪ್ಪು ದಿಕ್ಕಿನಲ್ಲಿ ಬರುತ್ತಿತ್ತು ಎಂದು ಪೊಲೀಸರು ಹೇಳಿದರೆ, ಪೊಲೀಸ್ ಜೀಪ್ ಹೋಟೆಲ್‌ಗೆ ಹೋಗಲು ಅಚಾನಕ್ ಆಗಿ ರಸ್ತೆಯ ಇನ್ನೊಂದು ಬದಿಗೆ ತಿರುಗಿದ್ದರಿಂದಲೇ ಈ ಅವಘಡ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ, ಅಪಘಾತದ ನಂತರ ಸ್ಥಳದಿಂದ ವಾಹನವನ್ನು ಸರಿಸಲು ಪೊಲೀಸರು ಪ್ರಯತ್ನಿಸಿದರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಸಮಾಜ ಸೇವಕನ ಅಗಲಿಕೆ:
ಮೃತ ರಾಜು ಅವರು ಪಶ್ಚಿಮ ಎಲೇರಿ ಗ್ರಾಮದ ಪುಂಗಮ್‌ಚಾಲ್ ನಿವಾಸಿಯಾಗಿದ್ದು, ಕೇವಲ ರಿಕ್ಷಾ ಚಾಲಕ ಮಾತ್ರವಲ್ಲದೆ ಉತ್ತಮ ಗಾಯಕರಾಗಿಯೂ ಗುರುತಿಸಿಕೊಂಡಿದ್ದರು. ಬಡವರ ಕಷ್ಟಕ್ಕೆ ಸ್ಪಂದಿಸಲು ಸಂಗೀತ ಕಾರ್ಯಕ್ರಮಗಳ ಮೂಲಕ ಹಣ ಸಂಗ್ರಹಿಸಿ ನೀಡುತ್ತಿದ್ದ ಇವರು ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಸರಿತಾ, ಮಗ ಸೌರವ್ ಮತ್ತು ಮಗಳು ಸೌಪರ್ಣಿಕಾ ಅವರನ್ನು ಅಗಲಿದ್ದಾರೆ. ಸದ್ಯ ವೆಳ್ಳರಿಕುಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
