ತುಪ್ಪದ ಹೊಳೆ, ʻಗನ್ ಪೌಡರ್ʼ ಧಮಾಕಾ: ದೋಸೆ ಪ್ರೇಮಿಗಳ ಪಾಲಿನ ಹೊಸ ಸ್ವರ್ಗ ʻಮಂಜೇಶ್ವರಂ ಕೆಫೆʼಯ ಸಕ್ಸಸ್ ಕಥೆ!

ಮಂಗಳೂರು: ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದು, ಸಾವಿರಾರು ರೂಪಾಯಿ ಚೆಲ್ಲಿ ರಾಮೇಶ್ವರಂ ಕೆಫೆಯ ದೋಸೆಗೆ ಕ್ಯೂ ನಿಲ್ಲುವವರ ಕಥೆಯನ್ನು ನೀವು ಕೇಳಿದ್ದೀರಿ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಮಂಜೇಶ್ವರದ ಅನಂತೇಶ್ವರನ ಸನ್ನಿಧಿಯ ರಥಬೀದಿಯಲ್ಲೊಂದು ಜನಸಾಮಾನ್ಯರ ಮನಗೆದ್ದಿರುವ ” ದ ಮಂಜೇಶ್ವರಂ ಕೆಫೆ” ಕಥೆಯನ್ನು ನೀವು ಕೇಳಿರಲಿಕ್ಕಿಲ್ಲ. ಇಲ್ಲಿನ ದೋಸೆಯ ಘಮಕ್ಕೆ ಮಾರುಹೋಗದವರಿಲ್ಲ. ಹಸಿದು ಬಂದ ಗ್ರಾಹಕನಿಗೆ ಶುಚಿ ರುಚಿಯಾದ ಆಹಾರ ನೀಡುವುದೇ ಇಲ್ಲಿನ ಸ್ಪೆಷಾಲಿಟಿ.

 

 

ದೋಸೆಗಳ ಹಬ್ಬ: ತುಪ್ಪದ ಹೊಳೆ, ಗನ್ ಪೌಡರ್ ಧಮಾಕಾ!
ಕಾದ ಹೆಂಚಿನ ಮೇಲೆ ದೋಸೆ ಬೀಳುವ ಶಬ್ದ ಕೇಳುವುದೇ ಒಂದು ಚಂದ. ದೋಸೆಯ ಮೇಲೆ ತುಪ್ಪವನ್ನು ಎಷ್ಟು ಧಾರಾಳವಾಗಿ ಸುರಿಯುತ್ತಾರೆಂದರೆ, ಅಪ್ಪಟ ತುಪ್ಪದ ಕೆನೆ ಭೋರ್ಗರೆಯುವ ಹಾಲಿನ ಹೊಳೆಯಂತೆ ಕಾಣುತ್ತದೆ. ಅದರ ಮೇಲೆ ಕೆಂಪು ಬಣ್ಣದ “ಗನ್ ಪೌಡರ್” ಚಿಮುಕಿಸಿದಾಗ ಅದು ಮೈದಳೆಯುವ ರೂಪವಿದೆಯಲ್ಲ, ಅದು ಹಸಿದವನ ಪಾಲಿಗೆ ಅಕ್ಷರಶಃ ಅಮೃತ. ಆ ಒಂದು ತುತ್ತು ಬಾಯಿಗಿಟ್ಟರೆ, ನಾಲಿಗೆಯ ಮೇಲೆ ಮಸಾಲೆಯ ಕಿಡಿಗಳು ಸಿಡಿಯುತ್ತವೆ. ಮೈಸೂರು ಮಸಾಲ ಇರಲಿ ಅಥವಾ ಬಾಯಲ್ಲಿ ಕರಗುವ ಸಾದಾ ದೋಸೆ ಇರಲಿ, ಇಲ್ಲಿನ ಪ್ರತಿಯೊಂದೂ ಆಹಾರ ಬಾಯಿ ಚಪ್ಪರಿಸುವಂತಹ ಅದ್ಭುತಗಳೇ.

ದಂಪತಿಯ ಕನಸಿನ ಹಾದಿ!
ಈ ಹೋಟೆಲ್ ಹುಟ್ಟಿದ್ದು ಕೇವಲ ಹಣಕ್ಕಾಗಿ ಅಲ್ಲ, ಅದೊಂದು ಆಪ್ತವಾದ ಕನಸು. ಮಂಜೇಶ್ವರ ರವಿರಾಜ್ ಶೆಣೈ ಮತ್ತು ಸ್ನೇಹಾ ರವಿ ದಂಪತಿ ಮೊದಲು ಬೇರೆಯದೇ ಕೆಲಸದಲ್ಲಿದ್ದರು. ಆದರೆ ತಮ್ಮೂರಿನ ಜನರಿಗೆ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಒಂದೊಳ್ಳೆ ಬಿಸಿಬಿಸಿ ದೋಸೆ ತಿನ್ನಲು ಐದಾರು ಕಿಲೋಮೀಟರ್ ಅಲೆಯಬೇಕಲ್ಲ ಎಂಬ ನೋವು ಇವರಿಗಿತ್ತು. ಆ ನೋವಿನಿಂದಲೇ ಹುಟ್ಟಿದ್ದು ಈ ಕೆಫೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ⬇️

ಶುಚಿ… ರುಚಿ… ಮತ್ತು ಆಪ್ತತೆ!
ಇಲ್ಲಿ ರಾಜಿಯಾಗುವುದು ಯಾವುದರಲ್ಲೂ ಇಲ್ಲ—ಕ್ವಾಲಿಟಿ ಮತ್ತು ಕ್ವಾಂಟಿಟಿ ಎರಡರಲ್ಲೂ ಇವರು ಪಕ್ಕಾ. ಇಲ್ಲಿನ ಗೋಳಿಬಜೆ, ವಡೆ ಸಾಂಬಾರ್ ಅಥವಾ ದಹಿ ವಡೆಯ ರುಚಿ ನೋಡಿದವರು ಮತ್ತೆ ಮತ್ತೆ ಬರುತ್ತಾರೆ. ರಿಪೀಟ್ ಕಸ್ಟಮರ್‌ಗಳೇ ಇವರ ಆಸ್ತಿ. ಸಂಜೆಯ ಆ ಒಂದು ಕಡಕ್ ಚಹಾ ಮತ್ತು ಚರ್ಮುರಿಯ ಜೊತೆ ಹರಟೆ ಹೊಡೆಯಲು ಈ ಹೋಟೆಲ್‌ಗಿಂತ ಒಳ್ಳೆಯ ಜಾಗ ಮಂಜೇಶ್ವರದಲ್ಲಿ ಇನ್ನೊಂದಿಲ್ಲ. ಮಾಲೀಕ ರವಿರಾಜ್ ಈಗ ಈ ರುಚಿಯನ್ನು ಇನ್ನೂ ಎರಡು ಮೂರು ಕಡೆಗಳಲ್ಲಿ ಪಸರಿಸುವ ಪ್ಲಾನ್‌ನಲ್ಲಿದ್ದಾರೆ.

ನೀವೇನಾದರೂ ಮಂಜೇಶ್ವರದ ಕಡೆ ಹೋದರೆ, ಅಲ್ಲಿನ ಅನಂತೇಶ್ವರನ ದರ್ಶನ ಮಾಡಿ ಹಾಗೆಯೇ ಈ ಮಂಜೇಶ್ವರಂ ಕೆಫೆಯ ಒಂದು ‘ಗನ್ ಪೌಡರ್ ದೋಸೆ’ಯನ್ನು ಸವಿದು ನೋಡಿ. ಆ ರುಚಿ ನಿಮ್ಮನ್ನು ಮತ್ತೆ ಮತ್ತೆ ಕರೆಯುವುದು ಖಂಡಿತ!

error: Content is protected !!